ಕುಕ್ಕೆಯ ಆನ್‍ಲೈನ್ ಸೇವೆಗಳ ನಿರ್ವಹಣೆ ಫ್ಯೂರ್ ಪ್ರೇಯರ್ ಸಂಸ್ಥೆಗಿಲ್ಲ: ಸಚಿವ ಕೋಟ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಆನ್‍ಲೈನ್ ಸೇವೆಗಳ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಾನು ಮುಜರಾಯಿ ಸಚಿವನಾಗಿ ಆಯ್ಕೆಯಾಗುವ ಮೊದಲೇ ರಾಜ್ಯದ 54 ದೇವಸ್ಥಾನಗಳ ಸೇವೆಯನ್ನು ಆನ್ ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸರ್ವೆಯನ್ನೂ ನಡೆಸಲಾಗಿದ್ದು, ಪ್ಯೂರ್ ಪ್ರೇಯರ್ ಸಂಸ್ಥೆಗೆ 15 ಜಿಲ್ಲೆಗಳ ದೇವಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು. ಉಳಿದ ಜಿಲ್ಲೆಗಳ ಸರ್ವೇ ಕಾರ್ಯವನ್ನು ಇನ್ನಷ್ಟೇ ಮಾಡಬೇಕಿದೆ. ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸೇವೆಗಳ ವಿಚಾರದಲ್ಲಿ ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ಸರಕಾರದ ಗಮನಕ್ಕೆ ಬಂದ ತಕ್ಷಣವೇ ಕುಕ್ಕೆ ಸುಬ್ರಹ್ಮಣ್ಯ ಸೇವೆಯನ್ನು ಸಂಸ್ಥೆಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.

ಪ್ಯೂರ್ ಪ್ರೇಯರ್ ಸಂಸ್ಥೆಯು ಎಲ್ಲಾ ದೇವಸ್ಥಾನಗಳ ಆನ್‍ಲೈನ್ ಸೇವೆಯನ್ನು ಉಚಿತವಾಗಿ ನಿರ್ವಹಿಸುತ್ತಿದ್ದ ಸರ್ಕಾರ ಯಾವುದೇ ವೆಚ್ಚವನ್ನು ಸಂಸ್ಥೆಗೆ ನೀಡುತ್ತಿಲ್ಲ. ಅಲ್ಲದೆ ಮುಜರಾಯಿ ಇಲಾಖೆ ತನ್ನದೇ ಹೊಸದಾದ ಸಾಫ್ಟ್‍ವೇರ್ ಅಭಿವೃದ್ಧಿಪಡಿಸುತ್ತಿದ್ದು, ಈ ಕಾರ್ಯ ಮುಂದಿನ ಎರಡು ತಿಂಗಳಲ್ಲಿ ಮುಗಿಯಲಿದೆ. ಆ ಬಳಿಕ ಇಲಾಖೆಯೇ ಎಲ್ಲಾ ದೇವಾಲಯಗಳ ಆನ್‍ಲೈನ್ ಸೇವೆಗಳನ್ನು ನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.

Comments

Leave a Reply

Your email address will not be published. Required fields are marked *