ಮೋದಿ ನೇತೃತ್ವದಲ್ಲಿ ಇಂದು ಸರ್ವ ಪಕ್ಷ ಸಭೆ – ಏನು ಚರ್ಚೆಯಾಗಬಹುದು?

ನವದೆಹಲಿ: ಕಳೆದ ಮೂರು ದಿನಗಳಿಂದ ಗಡಿಯಲ್ಲಿ ಚೀನಾ ಉಪಟಳ ಹೆಚ್ಚಾಗಿದೆ. ಒಂದು ಕಡೆ ಮಾತುಕತೆ ನಡೆಸುತ್ತಿರುವ ಡ್ರ್ಯಾಗನ್ ಬೆನ್ನ ಹಿಂದೆ ಯುದ್ಧಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚೀನಾದ ಬೆನ್ನು ಮುರಿಯುವ ಎಚ್ಚರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ರವಾನಿಸಿದ್ದಾರೆ. ಈ ಬೆಳವಣಿಗಳ ನಡುವೆ ಇಂದು ಸಂಜೆ ಐದು ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷದ ಸಭೆ ನಡೆಸಲಿದ್ದಾರೆ.

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಗಳ ಬಗ್ಗೆ ಮಾಹಿತಿ ನೀಡುವಂತೆ ವಿಪಕ್ಷಗಳು ಒತ್ತಡ ಹೇರಿದ್ದವು. ಈ ಹಿನ್ನಲೆ ಇಂದು ಸಂಜೆ ಐದು ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷಗಳ ಸಭೆ ನಡೆಸಲಿದ್ದು ಗಡಿಯಲ್ಲಿ ನಡೆಯುತ್ತಿರುವ ಬಗ್ಗೆ ವಿವರಣೆ ನೀಡಲಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಎಂ, ತೃಣ ಮೂಲ ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆ, ಜೆಡಿಎಸ್, ಬಿಎಸ್ಪಿ, ಎಸ್ಪಿ, ಬಿಜೆಪಿ, ಆಮ್ ಅದ್ಮಿ, ಸೇರಿದಂತೆ ಸುಮಾರು 19 ವಿಪಕ್ಷಗಳ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ.

ಸಭೆಯಲ್ಲಿ ಏನು ಚರ್ಚೆಯಾಗಬಹುದು?
* ಕಳೆದ ಒಂದು ತಿಂಗಳಿನಿಂದ ಗಾಲ್ವಾನ್ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರಣೆ.
* ವಾಸ್ತವ ಗಡಿ ರೇಖೆಯಲ್ಲಿ ಚೀನಾ ಸೃಷ್ಟಿಸಿರುವ ಆತಂಕದ ಬಗ್ಗೆ ಮಾಹಿತಿ ಹಂಚಿಕೆ.
* ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಜೊತೆಗಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆ ಕುರಿತು ವಿವರಣೆ.
* ಜೂನ್ 15 ರ ರಾತ್ರಿ ನಡೆದ ಭಾರತೀಯ ಸೈನಿಕರ ಮೇಲೆ ನಡೆದ ಹಲ್ಲೆಯ ಬಗ್ಗೆ ವರದಿ ನೀಡಬಹುದು.


* ಸೇನಾ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಆಧಾರಿಸಿ ಗಡಿ ಸಮಸ್ಯೆ ಇತ್ಯರ್ಥ ಮಾರ್ಗಗಳ ಬಗ್ಗೆ ಚರ್ಚೆ ನಡೆಸಬಹುದು.
* ದೇಶದ 20 ಸೈನಿಕರ ವೀರ ಮರಣಕ್ಕೆ ಪ್ರತಿಕಾರವೇನು? ಚೀನಾದ ಪ್ರತಿಕ್ರಿಯೆ ಆಧರಿಸಿ ಭಾರತದ ತೆಗೆದುಕೊಳ್ಳಲಿರುವ ನಿಲುವುಗಳ ಕುರಿತು ವಿವರಣೆ ನೀಡಬಹುದು
* ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಪಕ್ಷಗಳಿಂದ ಸಲಹೆ ಕೇಳಬಹುದು.
* ಗಡಿ ಸಮಸ್ಯೆ ಉದ್ವಿಗ್ನವಾಗಿರುವ ಹಿನ್ನೆಲೆ ಸರ್ಕಾರ ತೆಗೆದುಕೊಳ್ಳಲಿರುವ ಎಲ್ಲ ನಿರ್ಧರಗಳಿಗೆ ವಿಪಕ್ಷಗಳು ಸಹಕಾರ ನೀಡುವಂತೆ ಮನವಿ ಮಾಡಬಹುದು.

ಭಾರತದ ಇಪ್ಪತ್ತು ಸೈನಿಕರ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಶಪಥ ಮಾಡಿದ್ದಾರೆ. ಪ್ರತಿಯೊಬ್ಬ ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಈಗ ವಿಪಕ್ಷಗಳ ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ ಜೂನ್ 21ರ ರಾಷ್ಟ್ರೀಯ ಭಾಷಣದಲ್ಲಿ ಮಹತ್ವದ ನಿರ್ಧಾರ ಘೋಷಿಸಬಹುದು.

Comments

Leave a Reply

Your email address will not be published. Required fields are marked *