ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

-ಯಾರಿಗೆ ಯಾವ ಕಾರಣಕ್ಕೆ ಟಿಕೆಟ್?

ಬೆಂಗಳೂರು: ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ.

ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಹೊಸಕೋಟೆಯ ಉಪಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ವಪಕ್ಷೀಯರಿಂದಲೇ ಸೋಲು ಕಾಣಬೇಕಾಯ್ತು. ಬಿಜೆಪಿಯಿಂದ ಹೊರಬಂದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಸಿಕ್ಕಿರುವ ಸಾಧ್ಯತೆಗಳಿವೆ. ಅದರಂತೆ ಆರ್.ಶಂಕರ್ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರವನ್ನು ಬಿಜೆಪಿಯ ಹೈಕಮಾಂಡ್ ಆದೇಶದಂತೆ ಅರುಣ್ ಕುಮಾರ್ ಅವರಿಗೆ ತ್ಯಾಗ ಮಾಡಿದ ಪ್ರತಿಫಲವಾಗಿ ಟಿಕೆಟ್ ಲಭ್ಯವಾಗಿದೆ.

ಸಿಎಂ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಸಹ ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಗಾಗಿ ಚಿಂಚೋಳಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಈ ಹಿನ್ನೆಲೆ ಟಿಕೆಟ್ ಸಿಕ್ಕಿದೆ. ಇತ್ತ ಕೊನೆಯದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪ್ತ, ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ಲಭ್ಯವಾಗಿದೆ. ಪ್ರತಾಪ್ ಸಿಂಹ ನಾಯಕ್ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವ ಮುಖಂಡರಾಗಿದ್ದಾರೆ.

Comments

Leave a Reply

Your email address will not be published. Required fields are marked *