ಸರ್ಕಾರದ ಟೆಂಡರ್‌ಗಳಿಂದ ಚೀನಾ ಕಂಪನಿಗಳನ್ನು ದೂರವಿಡಿ- ಆರ್‍ಎಸ್‍ಎಸ್ ಅಂಗ ಸಂಸ್ಥೆ

– ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಜನರಲ್ಲಿ ಜಾಗೃತಿ ಮೂಡಿಸಿ
– ಸ್ವದೇಶಿ ಜಾಗರಣ್ ಮಂಚ್‍ನಿಂದ ಆಗ್ರಹ

ನವದೆಹಲಿ: ಸರ್ಕಾರಗಳ ಟೆಂಡರ್ ಗಳಲ್ಲಿ ಭಾಗವಹಿಸಿರುವ ಚೀನಾದ ಎಲ್ಲ ಕಂಪನಿಗಳಿಗೆ ನಿಷೇಧ ಹೇರಬೇಕು. ಅಲ್ಲದೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜನರಿಗೆ ಪ್ರೋತ್ಸಾಹ ನೀಡಬೇಕು ಎಂದು ಆರ್‍ಎಸ್‍ಎಸ್ ಸಂಯೋಜಿತ ಸ್ವದೇಶಿ ಜಾಗರಣ್ ಮಂಚ್(ಎಸ್‍ಜೆಎಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಚೀನಾ ಉಪಟಳ ಹೆಚ್ಚುತ್ತಿದ್ದು, ಜೂನ್ 15 ಹಾಗೂ 16ರಂದು ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಮಧ್ಯೆ ನಡೆದ ದಾಳಿ, ಪ್ರತಿ ದಾಳಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇವರಿಗೆ ಗೌರವ ಸಲ್ಲಿಸಬೇಕಾದರೆ ದೇಶದಲ್ಲಿ ಚೀನಾ ಕಂಪನಿ ಹಾಗೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಸ್ವದೇಶಿ ಜಾಗರಣ್ ಮಂಚ್‍ನ ಅಶ್ವಿನಿ ಮಹಾಜನ್ ಆಗ್ರಹಿಸಿದ್ದಾರೆ. ಅಲ್ಲದೆ ನಟ, ನಟಿಯರು ಹಾಗೂ ಕ್ರಿಕೆಟ್ ಆಟಗಾರರು ಸಹ ಚೀನಾ ಉತ್ಪನ್ನಗಳನ್ನು ಪ್ರೋತ್ಸಾಹಿಸದಂತೆ ತಿಳಿಸಿದ್ದಾರೆ.

ಎಸ್‍ಜೆಎಂ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕುವುದರ ಜೊತೆಗೆ ಕೇಂದ್ರ ಸರ್ಕಾರದ ಎಲ್ಲ ಟೆಂಡರ್‍ಗಳಿಂದ ಚೀನಾ ಕಂಪನಿಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೋಮವಾರ ರಾತ್ರಿ ನಡೆದ ಗುಂಡಿನ ಚಕಮಕಿ ವೇಳೆ 20 ಯೋಧರು ಹುತಾತ್ಮರಾಗಿದ್ದಾರೆ. ಕಳೆದ ಐದು ದಶಕಗಳಲ್ಲಿ ನಡೆದ ಅತಿ ದೊಡ್ಡ ಸೇನಾ ಕಾರ್ಯಾಚರಣೆ ಇದಾಗಿದೆ. ಚೀನಾ ಸೈನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಇದನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ.

ಪೂರ್ವ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 43 ಮಂದಿ ಯೋಧರನ್ನು ಸೆದೆಬಡಿದಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

ಘರ್ಷಣೆ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, ನಮ್ಮ ಮತ್ತು ಚೀನಾದ ಸೈನಿಕರು ಗಾಲ್ವಾನ್ ಪ್ರದೇಶದಿಂದ ಹೊರ ಬಂದಿದ್ದಾರೆ. ಆದರೆ ಜೂನ್ 15 ಹಾಗೂ 16ರಂದು ನಡೆದ ದಾಳಿಯಲ್ಲಿ 17 ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಒಟ್ಟು 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *