ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ- ಚಿರುವಿಗೆ ಕುಟುಂಬದಿಂದ ಭಾವನಾತ್ಮಕ ಓಲೆ

– ಯಾವಾಗಲೂ ನಮ್ಮ ಮನಸಲ್ಲೇ ಇರ್ತೀಯಾ ಬಂಗಾರ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರು ಅಗಲಿ ಇಂದಿಗೆ 11 ದಿನ ಕಳೆದಿದೆ. ಹೀಗಾಗಿ ಸರ್ಜಾ ಕುಟುಂಬದವರು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಪೂಜೆ ಸಲ್ಲಿಸಿದರು. ಅಗಲಿದ ಕುಟುಂಬದ ಕುಡಿಯನ್ನ ನೆನೆದು ದುಃಖದಿಂದ ವಿಧಿ ವಿಧಾನಗಳನ್ನ ಪೂರೈಸಿದರು.

ಚಿರುನಾ ಮರೆಯೋಕೆ ಆಗದೇ ಮನದಾಳದ ಮಾತುಗಳನ್ನು ಓಲೆಯ ಮೂಲಕ ನಟ ಅರ್ಜುನ್ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅರ್ಜುನ್ ಸರ್ಜಾ ಚಿರುವಿಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ಮೇಘನಾ ಮಡಿಲಲ್ಲಿ ಮಗುವಾಗಿ ಮತ್ತೆ ಚಿರು ಹುಟ್ಟಿ ಬರಬೇಕು ಎಂದು ಕುಟುಂಬದರು ಭಾನವಾತ್ಮಕವಾಗಿ ಚಿರುವಿನ ಬಗ್ಗೆ ಮಾತನಾಡಿದರು.

ಮನೆ ಮಗನಿಗೆ ಮನವಿ:
ನಿನ್ನ ಮನಸ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡು ಸ್ವಲ್ಪ ಮಾತಾಡಿದ್ರು, ನಮ್ಮನ್ನು ಬೈಕೊಂಡಿದ್ರು, ನಮಗೆ ಹೇಳದೆ ಯಾವುದಾದರೂ ಊರಿಗೆ ಹೋಗಿ ಬಂದಿದ್ರು ಪರವಾಗಿರುತ್ತಿರಲಿಲ್ಲ. ಆದರೆ ವಾಪಸ್ಸೇ ಬರಕ್ಕಾಗದಿರೋ ಅಂತ ಊರಿಗೆ ಹೋಗಿ ನಮಗೆಲ್ಲಾ ಅಂತ ಶಿಕ್ಷೆ ಕೊಟ್ಟಿದಿಯಲ್ಲಪ್ಪ.

ಕಣ್ಣು ಮುಚ್ಚಿದರೂ ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ. ಸರಿ ಸ್ವಲ್ಪ ದಿನ ಆದ ಮೇಲೆ ಮರೆತು ಬಿಡುತ್ತಾರೆ ಎಂತ ನೀನು ತಿಳಿದುಕೊಂಡರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವ ಅಂತ ಗಾಯ. ಯಾವಾಗಲೂ ನಮ್ಮ ಮನಸಲ್ಲಿ, ಹೃದಯದಲ್ಲೇ ಇರುತ್ತೀಯ ಕಂದ.

ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ಟರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.

ಚಿರು…ಈ ನೋವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡಬೇಕು ಅಂತ ಎಲ್ಲರು ಹೇಳುತ್ತಾರೆ. ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದರೆ, ದಯವಿಟ್ಟು ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೀಡುತ್ತೀವಿ.

https://www.instagram.com/tv/CBhU03KA4a1/?igshid=hmv5bw3ljrtn

ನಾವೆಲ್ಲರೂ ನಿನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಆದರೆ ನಿನ್ನ ತುಂಬಾ ಪ್ರೀತಿಸುತ್ತೇವೆ ಎಂದು ಅರ್ಜುನ್ ಸರ್ಜಾ ಇಡೀ ಕುಟುಂಬದ ಪರವಾಗಿ ಪತ್ರದ ಮೂಲಕ ಚಿರುವಿಗೆ ನಮನ ಸಲ್ಲಿಸಿದ್ದಾರೆ. ಈ ಓಲೆಯನ್ನು ಧ್ರುವ ಸರ್ಜಾರ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “Anna Love you forever” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಜೂನ್ 7 ರಂದು ಭಾನುವಾರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಜೂನ್ 8 ರಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ಚಿರಂಜೀವಿ ಮಣ್ಣಲ್ಲಿ ಮಣ್ಣಾಗಿದ್ದಾರೆ.

Comments

Leave a Reply

Your email address will not be published. Required fields are marked *