ತಂಟೆಕೋರ ಚೀನಾಗೆ ತಕ್ಕ ಉತ್ತರ – ಐವರು ಚೀನಿ ಸೈನಿಕರ ಹತ್ಯೆ

ನವದೆಹಲಿ: ಭಾರತ ಚೀನಾದ ನಡುವಿನ ಲಡಾಖ್‌ ಗಡಿಯಲ್ಲಿ ಸಂಘರ್ಷ ತೀವ್ರಗೊಂಡಿದ್ದು ಮೂವರು ಭಾರತದ ಯೋಧರು ಹುತಾತ್ಮರಾಗಿದ್ದರೆ ಅತ್ತ ಚೀನಾದ 5 ಮಂದಿ ಸೈನಿಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಲಡಾಖ್‌ ಗಡಿಯಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ ಭಾರತೀಯ ಸೇನೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳಿಗೆ ತಿಳಿಸಿದ ಹೇಳಿಕೆಯಲ್ಲಿ ಎರಡು ಕಡೆ ಸಂಘರ್ಷ ನಡೆದಿದ್ದು ಒಬ್ಬರು ಕರ್ನಲ್‌ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಚೀನಾ ಕಡೆಯೂ ಪ್ರಾಣ ಹಾನಿ ಸಂಭವಿಸಿದೆ ತಿಳಿಸಿತ್ತು.

ಚೀನಾ ಸರ್ಕಾರ ಅಧಿಕೃತವಾಗಿ ಸಾವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಚೀನಾದ ಗ್ಲೋಬಲ್‌ ಟೈಮ್ಸ್‌ ಪತ್ರಕರ್ತೆಯೊಬ್ಬರು ಭಾರತೀಯ ಸುದ್ದಿ ಮಾಧ್ಯಮಗಳನ್ನು ಉಲ್ಲೇಖಿಸಿ ಐದು ಮಂದಿ ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

5 ಮಂದಿ ಚೀನಾ ಚೈನಿಕರು ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಡಿದಾಟಕ್ಕೆ ಕಾರಣ ಏನು ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಕಲ್ಲು, ದೊಣ್ಣೆಗಳಿಂದ ಎರಡು ಕಡೆಯ ಸೈನಿಕರು ಹೊಡೆದಾಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸೋಮವಾರ ರಾತ್ರಿ ಸಂಘರ್ಷ ನಡೆದಿದೆ ಎನ್ನುವುದನ್ನು ಚೀನಾ ಒಪ್ಪಿಕೊಂಡಿದೆ. ಎರಡೂ ಬಾರಿ ನಮ್ಮ ದೇಶದ ಗಡಿಗೆ ನುಗ್ಗಿ ಭಾರತದ ಸೈನಿಕರು ದಾಳಿ ನಡೆಸಿದ್ದಾರೆ. ಆದರೆ ನಾವು ನಮ್ಮ ಗಡಿಯನ್ನು ದಾಟಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

 ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ನಾವು ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ಸಂಖ್ಯೆಯನ್ನು ವರದಿ ಮಾಡಿಲ್ಲ ಎಂದು ಟ್ವೀಟ್‌ ಮಾಡಿದೆ. ಇದಕ್ಕೆ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದು. ಭಾರತ ಸರ್ಕಾರ ಈಗಾಗಲೇ ಅಧಿಕೃತವಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ನೀವು ಯಾಕೆ ಇನ್ನೂ ಹೇಳುತ್ತಿಲ್ಲ. ನಿಮ್ಮ ಟ್ವೀಟ್‌ ಪ್ರಕಾರ ಸಾವು ಸಂಭವಿಸಿದೆ ಎನ್ನುವುದು ದೃಢವಾಗುತ್ತದೆ ಎಂದು ಟ್ವೀಟ್‌ ಮಾಡುತ್ತಿದ್ದಾರೆ.


ಗಡಿಯಲ್ಲಿ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಎರಡು ಕಡೆಯ ಮೇಜರ್‌ ಜನರಲ್‌ ಮಟ್ಟದ ಮಾತುಕತೆ ಆರಂಭವಾಗಿದೆ. ಲಡಾಖ್‌ ಗಡಿ ಬಳಿ ಭಾರತ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದು ಚೀನಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚೀನಾ ಗಡಿಯಲ್ಲಿ ಕಿರಿಕ್‌ ಮಾಡಲು ಆರಂಭಿಸಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಲು ಭಾರತ ಮುಂದಾಗಿದ್ದರೂ ಚೀನಾದ ಬೇಡಿಕೆಗೆ ಮಣಿದಿರಲಿಲ್ಲ. ಅಷ್ಟೇ ಅಲ್ಲದೇ ಯಾವುದೇ ಕಾರ್ಯಕ್ಕೂ ಅಭಿವೃದ್ಧಿ ಕೆಲಸ ನಿಲ್ಲಿಸುವುದಿಲ್ಲ ಎಂದು ಭಾರತ ಹೇಳಿದೆ.

Comments

Leave a Reply

Your email address will not be published. Required fields are marked *