ಬಿಸಿಸಿಐಗೆ ಗುಡ್‍ನ್ಯೂಸ್ ಕೊಟ್ಟ ಆಸೀಸ್ ಕ್ರಿಕೆಟ್ ಮಂಡಳಿ

ಮೆಲ್ಬರ್ನ್: ಹಣದ ಹೊಳೆಯನ್ನೇ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಬಿಸಿಸಿಐ ಸರ್ವ ಪ್ರಯತ್ನ ನಡೆಸಿದೆ. ಈ ನಿರ್ಧಾರಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ಗುಡ್‍ನ್ಯೂಸ್ ಸಿಕ್ಕಿದೆ.

2020ರ ಐಸಿಸಿ ಟಿ20 ವಿಶ್ವಕಪ್ ಆಥಿತ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಂಡಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಟೂರ್ನಿಯನ್ನು ನಡೆಸದಿರಲು ನಿರ್ಧರಿಸಿದೆ. ಹೀಗಾಗಿ ಐಪಿಎಲ್ ನಡೆಸಲು ಬಿಸಿಸಿಐಗೆ ಸೂಕ್ತ ವೇಳಾಪಟ್ಟಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನೂ ಓದಿ: ‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

ಇದೇ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಸುವ ಹಾಗೂ ಬಿಡುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇತ್ತ ಹೋಸ್ಟಿಂಗ್ ಹಕ್ಕುಗಳನ್ನು ಹೊಂದಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಕೊರೊನಾ ವೈರಸ್ ಭೀತಿಯ ಮಧ್ಯೆ ಟೂರ್ನಿಯ ಆತಿಥ್ಯ ವಹಿಸುವುದಿಲ್ಲ ಎಂದು ಪುನರುಚ್ಚರಿಸಿದೆ. ಇದರಿಂದಾಗಿ ಐಪಿಎಲ್ ನಡೆಸಲು ಬಿಸಿಸಿಐಗೆ ಅವಕಾಶ ಸಿಕ್ಕಂತಾಗಿದೆ. ಇದನ್ನೂ ಓದಿ: ಈ ವರ್ಷ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್‌ – ಹಣ ಹೇಗೆ ಬರುತ್ತೆ?

ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಕಾರ್ಲ್ ಎಡ್ಡಿಂಗ್ಸ್ ಅವರು, “ಈ ವರ್ಷದ ಟಿ20 ಟೂರ್ನಿಯ ಆತಿಥ್ಯ ವಹಿಸುವ ಸಾಧ್ಯತೆಗಳೇ ಇಲ್ಲ. ಟೂರ್ನಿಯ ಹಿನ್ನೆಲೆ 16 ದೇಶಗಳ ತಂಡಗಳು ಆಸ್ಟ್ರೇಲಿಯಾಕ್ಕೆ ಆಗಮಿಸುತ್ತವೆ. ಹೀಗಾಗಿ ಕೊರೊನಾ ವೈರಸ್ ಹರಡುವ ಭೀತಿ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಟೂರ್ನಿಯನ್ನು ಈ ವರ್ಷ ನಡೆಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಐಪಿಎಲ್‍ನ 13ನೇ ಆವೃತ್ತಿ ವೇಳಾಪಟ್ಟಿಯು ಟಿ20 ವಿಶ್ವಕಪ್‍ನ ಮೇಲೆ ನಿಂತಿತ್ತು. ಐಸಿಸಿಯಿಂದ ಅಧಿಕೃತ ಪ್ರಕಟಣೆಯನ್ನು ಕಾಯುತ್ತಿದ್ದರೂ, ಆಸ್ಟ್ರೇಲಿಯಾದ ನಿರ್ಧಾರರಿಂದ ಬಿಸಿಸಿಐಗೆ ಮತ್ತಷ್ಟು ಬಲ ಬಂದಂತಾಗಿದೆ.

Comments

Leave a Reply

Your email address will not be published. Required fields are marked *