ಕಾರನ್ನು ಹಿಂಬಾಲಿಸಿ ಬೈಕ್ ಡಿಕ್ಕಿ – ಹಾಡಹಗಲೇ ಸಿನಿಮಾ ಸ್ಟೈಲ್ ದರೋಡೆ, 45.50 ಲಕ್ಷದೊಂದಿಗೆ ಪರಾರಿ

ಬೆಂಗಳೂರು: ಹಾಡಹಗಲೇ ಚಾಕು ತೋರಿಸಿ ಬರೋಬ್ಬರಿ 45.50 ಲಕ್ಷ ಹಣ ಎಗರಿಸಿ ದರೋಡೆಕೋರರು ಎಸ್ಕೇಪ್ ಆಗಿರುವ ಘಟನೆ ಫ್ರೇಜರ್ ಟೌನ್‍ನಲ್ಲಿ ನಡೆದಿದೆ.

ಐಟಿಸಿ ಸಿಗರೇಟ್ ಕಂಪೆನಿ ಡಿಸ್ಟ್ರಿಬ್ಯೂಟರ್ ರಾಕೇಶ್ ಪೊಕರಾನ ಹಣ ಕಳೆದುಕೊಂಡವರು. ಜೂನ್ 11 ರಂದು ಸಂಜೆ 6 ವ್ಯಾಪಾರಿಗಳು, ಸೇಲ್ಸ್ ಮ್ಯಾನ್‍ಗಳಿಂದ ಹಣ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಬೈಕ್‍ನಲ್ಲಿ ಹಣವಿದ್ದ ಕಾರನ್ನು ಹಿಂಬಾಲಿಸಿ ಮೊದಲಿಗೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ನಾಲ್ವರು ಕಾರನ್ನು ಅಡ್ಡಗಟ್ಟಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ರಾಕೇಶ್ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
45.50 ಸಾವಿರ ಹಣವನ್ನು ಬಿಸ್ಕೆಟ್ ತುಂಬುವ ಕಾರ್ಡ್ ಬೋರ್ಡ್ ಬಾಕ್ಸಿನಲ್ಲಿ ಹಾಕಿಕೊಂಡು ಮಾರುತಿ ವ್ಯಾಗನರ್ ಕಾರಿನಲ್ಲಿ ನಾನು ಮತ್ತು ಚಾಲಕ ಹೋಗುತ್ತಿದ್ದೆವು. ಬಾಕ್ಸನ್ನು ಕಾರಿನ ಮುಂಭಾಗದ ಸೀಟಿನ ಕೆಳಗೆ ಇಟ್ಟಿದ್ದೆ. ಫ್ರೇಜರ್ ಟೌನ್ ಬಳಿ ಬೈಕಿನಲ್ಲಿ ಬರುತ್ತಿದ್ದವರು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದರು. ಆದರೂ ನಾವು ಕಾರನ್ನ ನಿಲ್ಲಿಸದೆ ಹೋಗುತ್ತಿದ್ದೆವು. ಆದರೆ ಬೈಕಿನಲ್ಲಿದ್ದವರು ನಮ್ಮನ್ನು ಫಾಲೋ ಮಾಡಿಕೊಡು ಬಂದು ಕಾರನ್ನ ಅಡ್ಡಗಟ್ಟಿದರು. ನಂತರ ಓರ್ವ ಕಾರಿನಲ್ಲಿದ್ದ ಬಾಕ್ಸ್ ತೆಗೆದುಕೊಳ್ಳಲು ಬಂದನು. ಈ ವೇಳೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಮತ್ತು ಚಾಲಕನಿಗೆ ಚಾಕುವನ್ನು ತೋರಿಸಿ ಹಣವನ್ನು ಎತ್ತಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ದರೋಡೆಕೋರರ ವಿರುದ್ದ ಎಫ್‍ಐಆರ್ ದಾಖಲಿಸಿದ್ದು, ಮೂರು ವಿಶೇಷ ತಂಡಗಳಿಂದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಆ ಏರಿಯಾದ ಸಿಸಿ ಕ್ಯಾಮರಾವನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *