ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿಗೆ ಕೊರೊನಾ ಸೋಂಕು

ನವದೆಹಲಿ: ಇಲ್ಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ-1ರಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ರೂಂ ಬಾಯ್ ಕೆಲಸ ಮಾಡುತ್ತಿದ್ದ 25 ವರ್ಷ ವಯಸ್ಸಿನ, ದೆಹಲಿ ಮೂಲದ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕಿರುವುದು ಧೃಡಪಟ್ಟಿದೆ. ಜೂನ್ 8ರ ವರೆಗೆ ಕೆಲಸಕ್ಕೆ ಬಂದಿದ್ದ ಈ ಯುವಕ ಜ್ವರದಿಂದ ಬಳಲಿದ್ದರು. ಈ ಹಿನ್ನೆಲೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ಬಳಿಕ ಇಂದು ಸೋಂಕು ಇರುವುದು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಯಲ್ಲಿ ಅಲ್ಪ ಪ್ರಮಾಣದ ರೋಗ ಲಕ್ಷಣ ಗೋಚರಿಸಿದ್ದರಿಂದ ಮನೆಯಲ್ಲೇ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಭವನ-1ರಲ್ಲಿ ಈ ವ್ಯಕ್ತಿ ಕಾರ್ಯ ನಿರ್ವಹಿಸುತ್ತಿದ್ದ ಕೊರೊನಾ ಧೃಡಪಟ್ಟ ಬಳಿಕ ಇವರ ಸಂಪರ್ಕಕ್ಕೆ ಬಂದಿದ್ದ ಇತರ ಸಿಬ್ಬಂದಿ ಯಾರು ಎಂಬ ಕುರಿತು ಪತ್ತೆ ಮಾಡುವ ಕಾರ್ಯ ಆರಂಭಿಸಲಾಗುವುದು ಎಂದು ಭವನದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇಲ್ಲಿ ಹೊಂದಿರುವ ಮೂರು ಭವನಗಳಲ್ಲೂ ಅಟೊಮೆಟಿಕ್ ಸ್ಯಾನಿಟೈಸರ್ ಸಾಧನ ಇರಿಸಲಾಗಿದ್ದು, ಕೊರೊನಾ ಸೋಂಕು ತಡೆಗೆ ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇತರ ಸಿಬ್ಬಂದಿಯ ಆರೋಗ್ಯ ತಪಾಸಣೆಗೂ ಕ್ರಮ ಕೈಗೊಳ್ಳಲು ನಿರ್ಧರಿಸಬಹುದು ಎಂದು ತಿಳಿದುಬಂದಿದೆ.

ದೆಹಲಿಯ ನಿವಾಸಿಯಾಗಿರುವ ಈ ವ್ಯಕ್ತಿಗೆ ಭವನದ ಸಿಬ್ಬಂದಿ ಅಲ್ಲದೇ, ಇತರರ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *