ಪತ್ನಿಯನ್ನ ಆಸ್ಪತ್ರೆಗೆ ಸೇರಿಸಿ ವಿಷ ಕುಡಿದ- ಬೆಳಗ್ಗೆ ಹೆಂಡ್ತಿ, ಸಂಜೆ ಪತಿ ಸಾವು

– ಪ್ರೀತಿಸಿ 8 ತಿಂಗಳ ಹಿಂದೆಯಷ್ಟೆ ಜೋಡಿ ಮದ್ವೆ
– ಪೋಷಕರಿಗೆ ಗುಡ್‍ನ್ಯೂಸ್ ಹೇಳೋಣ ಎಂದಿದ್ದೆ ತಪ್ಪಾಯ್ತು

ಹೈದರಾಬಾದ್: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಗುಂಜಿ ವೆಂಕಟೇಶ್ವರ ರಾವ್ (24) ಮತ್ತು ಶ್ರಾವಣಿ (21) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಎರಡು ಮನೆಯವರ ವಿರೋಧದ ನಡುವೆಯೂ 2019ರ ಅಕ್ಟೋಬರ್ ನಲ್ಲಿ ಮದುವೆಯಾಗಿದ್ದರು. ವೆಂಕಟೇಶ್ವರ ರಾವ್ ಕೃಷಿ ಕೆಲಸ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದರು.

ಇತ್ತೀಚೆಗಷ್ಟೆ ಶ್ರಾವಣಿ ಗರ್ಭಿಣಿಯಾಗಿದ್ದಳು. ಈ ಖುಷಿಯ ವಿಚಾರವನ್ನು ತನ್ನ ಮನೆಯವರಿಗೆ ಹೇಳಬೇಕು ಎಂದು ಶ್ರಾವಣಿ ಪತಿ ವೆಂಕಟೇಶ್ವರ ರಾವ್ ಬಳಿ ಜೂನ್ 10 ರಂದು ಅಂದರೆ ಬುಧವಾರ ತಮ್ಮ ಹುಟ್ಟೂರಿಗೆ ಹೋಗೋಣ ಎಂದು ಕೇಳಿಕೊಂಡಿದ್ದಳು. ಇದಕ್ಕೆ ಪತಿ ನಿರಾಕರಿಸಿದ್ದು, ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಶ್ರಾವಣಿ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನ ಗಮನಿಸಿದ ಪತಿ ಆಕೆಯನ್ನು ತಕ್ಷಣ ಸಮೀಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾನೆ. ಆದರೆ ವೈದ್ಯರು ಶ್ರಾವಣಿಯ ಸ್ಥಿತಿ ಗಂಭೀರವಾಗಿದೆ ಎಂದು ವೆಂಕಟೇಶ್ವರ ರಾವ್‍ಗೆ ಹೇಳಿದ್ದಾರೆ. ಇದನ್ನು ಸಹಿಸಲಾಗದ ಪತಿ ಕೂಡ ಗುರುವಾರ ಗುಂಟೂರು ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲೇ ಕೀಟನಾಶಕವನ್ನು ಕುಡಿದಿದ್ದಾನೆ.

ಸ್ಥಳೀಯರು ಆತನನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಶ್ರಾವಣಿ ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇತ್ತ ವೆಂಕಟೇಶ್ವರ ರಾವ್ ಕೂಡ ಸಂಜೆ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *