ವಿಧಿ ಎಷ್ಟು ಕ್ರೂರಿ – ‘ಖಾಕಿ’ ವೇಳೆ ಚಿರು ಜೊತೆಗಿನ ಅನುಭವ ಹಂಚಿಕೊಂಡ ಲಹರಿ ವೇಲು

ಬೆಂಗಳೂರು: ತುಂಬಾ ಹೃದಯವಂತಿಕೆಯಿಂದ ಇದ್ದರು. ವಿಧಿ ಎಷ್ಟು ಕ್ರೂರಿ, ಜೀವನ ಎಂದರೆ ಇಷ್ಟೆನಾ ಎನಿಸುತಿದೆ ಎಂದು ಲಹರಿ ಸಂಸ್ಥೆಯ ಮುಖ್ಯಸ್ಥ ನೋವಿನಿಂದ ಮಾತನಾಡಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ನನಗೆ ಚಿರಂಜೀವಿ ಸಾವಿನ ಸುದ್ದಿ ಬಂದಾಗ ತಮಾಷೆ ಮಾಡುತ್ತಿದ್ದೀರ ಎಂದು ಕೋಪ ಮಾಡಿಕೊಂಡೆ. ನಂತರ ಮಾಧ್ಯಮ ನೋಡಿದಾಗ ನನಗೂ ಶಾಕ್ ಆಯಿತು. ಇದನ್ನೂ ಈಗಲೂ ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನಿಂದ ಮಾತ್ರವಲ್ಲ ಈಗಾಗಲೇ ನೂರಾರು ಜನರು ನನಗೆ ಫೋನ್ ಮಾಡಿ ಇದು ನಿಜನಾ ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ಎರಡು ತಿಂಗಳ ಹಿಂದೆಯಷ್ಟೆ ಚಿರಂಜೀವಿ ಸರ್ಜಾರ ಅಭಿನಯದ ‘ಖಾಕಿ’ ಸಿನಿಮಾದಲ್ಲಿ ನಾನು ಮಾಡಿದ್ದೆ. ಸುಮಾರು 15 ದಿನಗಳ ಕಾಲ ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇನೆ. ತುಂಬಾ ಹೃದಯವಂತಿಕೆಯಿಂದ ಇದ್ದರು. ಜೀವನ ಎಂದರೆ ಇಷ್ಟೆನಾ, ವಿಧಿ ಎಷ್ಟು ಕ್ರೂರವಾಗಿದೆ ಎಂದು ನೋವಿನಿಂದ ಮಾತನಾಡಿದರು.

‘ಖಾಕಿ’ ಸಿನಿಮಾ ಚಿತ್ರೀಕರಣದ ವೇಳೆ ನೀವು ತುಂಬಾ ಫಿಟ್ ಆಗಿದ್ದೀರ. ನಾನು ಕೂಡ ಜಿಮ್ ಮಾಡುತ್ತಿದ್ದೀನಿ. ಫಿಟ್ ಆಗುತ್ತೇನೆ ಎಂದಿದ್ದರು. ಪ್ರತಿಯೊಬ್ಬರ ಜೊತೆಯೂ ಒಂದೇ ರೀತಿ ಇದ್ದರು. ನಟ ಎಂಬ ಯಾವುದೇ ಅಹಂ ಇರಲಿಲ್ಲ. ಈ ಕೊರೊನಾ ಬಂದು ಎಲ್ಲರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದೆ. ಮೊನ್ನೆ ನಿಸಾರ್ ಅಹಮದ್ ನಮ್ಮನ್ನು ಅಗಲಿ ಹೋದರು. ಈಗ ಚಿರಂಜೀವಿ. ಮೊನ್ನೆ ಮೊನ್ನೆಯವರೆಗೆ ನಮ್ಮ ಜೊತೆ ಇದ್ದವರು ನಿಧನರಾಗುತ್ತಿರುವುದನ್ನು ನೋಡಿ ಶಾಕ್ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾಮಾರಿ ಕೊರೊನಾ ಬಂದ ಸಂದರ್ಭದಲ್ಲಿ ಇಫ್ರಾನ್ ಖಾನ್, ನಂತರ ವಾಜೀದ್ ಖಾನ್, ಈಗ ಚಿರಂಜೀವಿ ಸರ್ಜಾ ಅಗಲಿದ್ದಾರೆ. ಹೀಗಾಗಿ ಈ ಮಾಹಾಮಾರಿ ಕೊರೊನಾ ಬಂದು ಒಬ್ಬೊಬ್ಬರಂತೆ ಕರೆದುಕೊಂಡು ಹೋಗುತ್ತಿದೆ ಎಂದು ಕೊರೊನಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *