ರಾಜ್ಯದಲ್ಲಿ ಇಂದು 378 ಮಂದಿಗೆ ಕೊರೊನಾ- 5,213ಕ್ಕೆ ಏರಿದ ಸೋಂಕಿತರ ಸಂಖ್ಯೆ

– ಹೆಮ್ಮಾರಿಗೆ ಇಬ್ಬರು ಬಲಿ, 280 ಮಂದಿ ಡಿಸ್ಚಾರ್ಜ್
– ಉಡುಪಿಗೆ ಮತ್ತೊಮ್ಮೆ ಆಘಾತ

ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದೆ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನ 378 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆ ಕಂಡಿದೆ.

ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಬರುತ್ತಿದೆ. ಅದರಲ್ಲೂ ಶುಕ್ರವಾರ ದಾಖಲೆಯ 515 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ನಿನ್ನೆಗಿಂತ ಇಂದು ಸೋಂಕಿತ ಸಂಖ್ಯೆ ಇಳಿಕೆ ಕಂಡಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಉಡುಪಿ 121, ಯಾದಗಿರಿ 103, ಕಲಬುರಗಿ 69, ಬೆಂಗಳೂರು ನಗರ 18, ದಕ್ಷಿಣ ಕನ್ನಡ 24, ವಿಜಯಪುರ, ದಾವಣಗೆರೆ ಜಿಲ್ಲೆಯಲ್ಲಿ ತಲಾ 6, ಬೆಳಗಾವಿ 5, ಗದಗ 4, ಹಾಸನ, ಮಂಡ್ಯ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ತಲಾ ಮೂವರು, ರಾಯಚೂರು, ಬೀದರ್, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ ಹಾಗೂ ತುಮಕೂರು, ಕೋಲಾರ, ಕೊಪ್ಪಳ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸಾವು:
ರೋಗಿ-1951: ಬೀದರ್‍ನ 55 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಮಹಿಳೆಯು ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಜೋನ್‍ನ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಅವರನ್ನು ಮೇ 16ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೇ 5ರಂದು ಮೃತಪಟ್ಟಿದ್ದರು.

ರೋಗಿ-5010: ವಿಜಯಪುರದ 82 ವರ್ಷದ ಮಹಿಳೆ ಹೆಮ್ಮಾರಿ ಕೋವಿಡ್-19ಗೆ ಬಲಿಯಾಗಿದ್ದಾರೆ. ಮಹಿಳೆ ವಿಜಯಪುರ ಜಿಲ್ಲೆಯ ಕಂಟೈನ್‍ಮೆಂಟ್ ಜೋನ್‍ನ ನಿವಾಸಿಯಾಗಿದ್ದು, ಅವರಿಗೆ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯ ಹಿನ್ನಲೆಯನ್ನು ಹೊಂದಿದ್ದರು. ಮೇ 27ರಂದು ಅವರ ಮನೆಯಲ್ಲಿ ನಿಧನ ಹೊಂದಿದ್ದರು. ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಗಂಟಲು ದ್ರವವನ್ನು ಟೆಸ್ಟ್ ಗೆ ಕಳುಹಿಸಿದ್ದರು. ಸದ್ಯ ಬಂದ ರಿಪೋರ್ಟ್ ನಲ್ಲಿ ಕೊರೊನಾ ತಗುಲಿದ್ದು ದೃಢಪಟ್ಟಿದೆ.

ಡಿಸ್ಜಾರ್ಜ್:
ಕೊರೊನಾ ಮಹಾಮಾರಿಯಿಂದ ಇಂದು ಒಟ್ಟು 280 ಜನರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದರೊಂದಿಗೆ ಗುಣಮುಖರಾಗಿರುವವರ ಸಂಖ್ಯೆ 1,968ಕ್ಕೇರಿದೆ. ರಾಜ್ಯದಲ್ಲಿ ಸದ್ಯ 3,184 ಪ್ರಕರಣಗಳು ಸಕ್ರಿಯಾಗಿವೆ. ಇಂದು ಪತ್ತೆಯಾದ ಪಾಸಿಟಿವ್ ಪ್ರಕರಣ ಪೈಕಿ 333 ಪ್ರಕರಣಗಳು ಅಂತರರಾಜ್ಯ ಹಾಗೂ 8 ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದೆ. ರಾಜ್ಯದ ವಿವಿಧ ಆಸ್ಪತ್ರೆಯ ತುರ್ತು ನಿಗಾ ಘಟಕಗಳಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಪರೀಕ್ಷೆ ಮಾಡಿದ 11,862 ಮಾದರಿಗಳಲ್ಲಿ 11,431 ನೆಗೆಟಿವ್ ಬಂದಿದ್ದು, 35,632 ಮಂದಿ ಕಾರಂಟೈನ್‍ನಲ್ಲಿದ್ದಾರೆ. ರಾಜ್ಯದಲ್ಲಿ ಇದುವರೆಗೂ 3,72,582 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಒಟ್ಟು 3,61,382 ಮಾದರಿಗಳು ನೆಗೆಟಿವ್ ಬಂದಿದೆ. 5,213 ಪಾಟಿಸಿಟಿವ್ ವರದಿಗಳು ದೃಢವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದು 248 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಒಟ್ಟಾರೆ ಈವರೆಗೆ ಏರ್ ಪೋರ್ಟ್‍ನಲ್ಲಿ 1,46,979 ತಪಾಸಣೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *