ರಕ್ಷಣಾ ಕಾರ್ಯದರ್ಶಿಗೂ ಕೊರೊನಾ ಪಾಸಿಟಿವ್- ಇದೇ ಕಟ್ಟಡದಲ್ಲಿದೆ ರಾಜನಾಥ್ ಸಿಂಗ್ ಕಚೇರಿ

– ಸಚಿವಾಲಯದ ಕಚೇರಿಯಲ್ಲಿ 35ಕ್ಕೂ ಹೆಚ್ಚು ಜನ ಕೆಲಸ
– ಸೇನೆ, ನೌಕಾಪಡೆಯ ಮುಖ್ಯಸ್ಥರ ಕಚೇರಿಗಳೂ ಇಲ್ಲಿವೆ

ನವದೆಹಲಿ: ಭಾರತೀಯ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರಿಗೂ ಕೊರೊನಾ ಸೋಂಕು ತಗುಲಿರುವುದು ಬುಧವಾರ ಖಚಿತವಾಗಿದೆ ಎಂದು ವರದಿಯಾಗಿದೆ.

ಅಜಯ್ ಕುಮಾರ್ ಅವರಿಗೆ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ಸಂಪರ್ಕದ ಮೂಲ ಪತ್ತೆಹಚ್ಚಲು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಅಜಯ್ ಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.

ರೈಸೀನಾ ಹಿಲ್ಸ್ ಸೌತ್ ಬ್ಲಾಕ್‍ನಲ್ಲಿರುವ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಕನಿಷ್ಟ 35 ಜನ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಅಜಯ್ ಕುಮಾರ್ ಅವರಿಗೆ ಸೋಂಕು ತಗುಲಿದ ಹಿನ್ನೆಲೆ ಎಲ್ಲರನ್ನೂ ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ. ಅಜಯ್ ಕುಮಾರ್ ಅವರ ಆರೋಗ್ಯ ಸ್ಥಿತಿಗತಿ ಕುರಿತು ಈ ವರೆಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಈ ಕುರಿತು ಪ್ರತಿಕ್ರಿಯಿಸಲು ರಕ್ಷಣಾ ಸಚಿವಾಲಯದ ವಕ್ತಾರರು ನಿರಾಕರಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಚೇರಿಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. ಇದೇ ಕಚೇರಿಯ ಮೊದಲನೇ ಮಹಡಿಯಲ್ಲಿ ರಕ್ಷಣಾ ಸಚಿವರು, ರಕ್ಷಣಾ ಕಾರ್ಯದರ್ಶಿ, ಸೇನೆ ಮುಖ್ಯಸ್ಥ ಹಾಗೂ ನೌಕಾಪಡೆಯ ಮುಖ್ಯಸ್ಥರ ಕಚೇರಿಗಳು ಇವೆ. ಜನರ ಸಂಪರ್ಕ- ಪತ್ತೆಹಚ್ಚುವುದು, ಸಂಪರ್ಕ ತಡೆಯ ಕುರಿತ ಎಲ್ಲ ನಿಯಮಗಳನ್ನು ಸೂಕ್ಷ್ಮವಾಗಿ ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *