ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

ಕೋಲಾರ: ಕಳೆದ ಎರಡೂವರೆ ತಿಂಗಳಿಂದ ಎಲ್ಲೆಡೆ ಕೊರೊನಾ ಲಾಕ್‍ಡೌನ್ ಆಗಿ ಹೋಟೆಲ್ ಉದ್ಯಮ ಸೇರಿದಂತೆ ಜನಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿ ಜನ ಸಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಕೋಲಾರದಲ್ಲೊಬ್ಬ ಅಜ್ಜಿ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಪಾಲಿನ ಅನ್ನಪೂರ್ಣೆಶ್ವರಿಯಾಗಿದ್ದಾರೆ.

ಪ್ರಸ್ತುತ ಕಾಲದಲ್ಲಿ ಒಂದು ಪುಟ್ಟ ಇಡ್ಲಿಗೆ ಐದು ರೂ. ಟೀ-ಕಾಫಿಗೆ 10 ರಿಂದ 20 ರೂಪಾಯಿ ಕೊಡಲೇಬೇಕು. ಇನ್ನೂ ಹೊಟ್ಟೆ ತುಂಬಾ ತಿನ್ನಬೇಕಂದ್ರೆ ಕನಿಷ್ಟ 40 ರಿಂದ 50 ರೂಪಾಯಿ ಕೊಡಲೇಬೇಕು. ಆದರೆ ಇಲ್ಲೊಬ್ಬ 85 ವರ್ಷದ ಅಜ್ಜಿ ಕಳೆದ 50 ವರ್ಷಗಳಿಂದ ಇಡ್ಲಿಯನ್ನು ನಾಲ್ಕಾಣೆ, ಐವತ್ತು ಪೈಸೆ, ಈಗ 1 ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ರೂಪಾಯಿಗೆ ಇಡ್ಲಿ ಮಾರುತ್ತಿರುವ ಈ ಅಜ್ಜಿಯ ಹೆಸರು ಸೆಲ್ವಮ್ಮ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪ್‍ಹೌಸ್ ಬಳಿ ಈ ಅಜ್ಜಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ಅಜ್ಜಿ ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿ ಖಾಲಿಯಾಗುತ್ತೆ. ಬೆಳಗ್ಗೆ 7 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ತಿಂಡಿ ಖರೀದಿ ಮಾಡಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಈ ಇಳಿವಯಸ್ಸಿನಲ್ಲೂ ಪ್ರತಿದಿನ 300 ಇಡ್ಲಿ, ಚಟ್ನಿ ಸಾಂಬಾರು ಸಹ ಅಜ್ಜಿ ಒಬ್ಬರೇ ತಯಾರು ಮಾಡುತ್ತಾರೆ.

ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳೇ ಆಗಿದೆ. ಇವರ ಬಳಿ ಹೆಚ್ಚಾಗಿ ಬಡವರು, ಗಾರ್ಮೆಂಟ್ಸ್ ಮಹಿಳೆಯರು. ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡ್ತಿರೋದಕ್ಕೆ ಇನ್ನುಳಿದ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *