ತಮಿಳುನಾಡಿನಿಂದ ಬರುವವರಿಗೆ ಮಾದಪ್ಪನ ದರ್ಶನಕ್ಕೆ ನಿರ್ಬಂಧ

– ಊಟಕ್ಕೆ ಬಫೆ ಮಾದರಿ, ಇಲ್ಲವೇ ಲಾಡು ಪ್ಯಾಕೆಟ್

ಚಾಮರಾಜನಗರ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ತಮಿಳುನಾಡಿನಿಂದ ಬರುವ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾಹಿತಿ ನೀಡಿದ್ದು, ಸರ್ಕಾರದ ಆದೇಶದ ಹಿನ್ನೆಲೆ ಜೂ.8ರಿಂದ ದೇವಾಲಯದಲ್ಲಿ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ದಾಸೋಹಕ್ಕೆ ಬಂದವರಿಗೆ ಲಾಡು ಪ್ಯಾಕೆಟ್ ವಿತರಿಸಲು ಚಿಂತಿಸಲಾಗಿದೆ. ದೇವಾಲಯಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ಸ್ಕ್ರೀನಿಂಗ್‍ಗೆ ಒಳಗಾಗಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಅಲ್ಲದೆ ಸದ್ಯಕ್ಕೆ ಮಲೆ ಮಾದಪ್ಪನ ದರ್ಶನಕ್ಕೆ ಬರುವ ಗೂಡ್ಸ್ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದರು.

ಒಂದು ಬಾರಿ ದರ್ಶನಕ್ಕೆ 180 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಟ್ಟದಲ್ಲಿ ಉಳಿದುಕೊಳ್ಳಲು ಭಕ್ತರಿಗೆ ಅವಕಾಶವಿಲ್ಲ. ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ದಾಸೋಹಕ್ಕೆ ಸಂಬಂಧಿಸಿದಂತೆ ಲಾಡು ಪ್ಯಾಕೆಟ್ ಅಥವಾ ಬಫೆ ಮಾದರಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಕುರಿತು ಪ್ರಾಧಿಕಾರ ನಿರ್ಧಾರ ಕೈಗೊಳ್ಳಲಿದ್ದು, ತಾಳಬೆಟ್ಟದಲ್ಲೂ ಭಕ್ತರಿಗೆ ತಪಾಸಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *