ರೂಮ್‍ನಲ್ಲಿ ಕೈತೊಳೆಯುತ್ತಿದ್ದ ಟೋಲ್ ಕಾರ್ಮಿಕನನ್ನ ಎಳೆದೊಯ್ದ ಲಾರಿ

– ಸಾವಿನ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನೆಲಮಂಗಲದ ನವಯುಗ ಟೋಲ್‍ನಲ್ಲಿ ನಡೆದಿದೆ.

ಗೋಪಾಲ್ ಮೃತ ದುರ್ದೈವಿ. ಭೀಕರ ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಮಂದಿನ ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಲಕ ನಿಯಂತ್ರಣದ ತಪ್ಪಿದ ಲಾರಿ ನೆಲಮಂಗಲದ ನವಯುಗ ಟೋಲ್‍ನಲ್ಲಿ ನುಗ್ಗಿತ್ತು. ಈ ವೇಳೆ ಟೋಲ್‍ನ ಕೌಂಟರ್ ರೂಮ್‍ನಲ್ಲಿ ಗೋಪಾಲ್ ಅವರು ಕೈತೊಳೆಯುತ್ತಿದ್ದರು. ಆದರೆ ವೇಗವಾಗಿ ಬಂದ ಲಾರಿ ಅವರನ್ನು ಎಳೆದೊಯ್ದ ಪರಿಣಾಮ ಗೋಡೆ ಹಾಗೂ ಲಾರಿಯ ಮಧ್ಯೆ ಸಿಲುಕಿ ಗೋಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮುಂದೆ ನಿಂತಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಮುಂದಿದ್ದ ಡಿವೈಡರ್ ಏರಿ ನಿಂತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಘಟನೆಗೆ ಟೋಲ್ ನಿರ್ಮಾಣ ಸಹ ಕಾರಣವಾಗಿದೆ. ಟೋಲ್ ಕೌಂಟರ್ ರೂಮ್ ಬಾಗಿಲು ರಸ್ತೆ ಕಡೆಗೆ ಇರದೇ ಬೇರೆಕಡೆ ಇದ್ದಿದ್ದರೇ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅವೈಜ್ಞಾನಿಕ ಮಾದರಿ ಟೋಲ್ ನಿರ್ಮಾಣ ಕೂಡ ಕಾರಣವಿರಬಹುದು. ಟೋಲ್‍ಗಳ ಬಾಗಿಲನ್ನು ಮತ್ತು ಕೆಲಸಗಾರರ ಸಂಚಾರಕ್ಕೆ ಬೇರೆ ಮಾರ್ಗದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *