ಕೊರೊನಾ ಗೆದ್ದ 18 ಮಕ್ಕಳು- ಡ್ರಾಯಿಂಗ್ ಬುಕ್, ಚಾಕ್ಲೇಟ್ ಕೊಟ್ಟು ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಕಳೆದ ಹತ್ತು ದಿನಗಳಿಂದ ಹೋರಾಡಿದ ಹದಿನೆಂಟು ಮಕ್ಕಳು ರೋಗ ಗೆದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಮಕ್ಕಳಿಗೆ ಗಿಫ್ಟ್, ಚಾಕ್ಲೇಟ್ ಕೊಟ್ಟು ಉಡುಪಿ ಡಿಸಿ ಇಂದು ಅವರನ್ನೆಲ್ಲಾ ಮನೆಗೆ ಕಳುಹಿಸಿಕೊಟ್ಟರು.

ಜಿಲ್ಲೆಯಲ್ಲಿ ಇಂದು ಒಂದೇ ದಿನ 40 ಮಂದಿ ಪಾಸಿಟಿವ್ ಕೊರೊನಾ ಇದ್ದವರು ರೋಗಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ 18 ಮಕ್ಕಳನ್ನು ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಉಡುಪಿ ಜಿಲ್ಲಾಡಳಿತ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರು ಮಕ್ಕಳನ್ನು ಶುಭಕೋರಿ ಕಳುಹಿಸಿಕೊಟ್ಟಿದ್ದಾರೆ.

ಟಿಎಂಎ ಪೈ ಆಸ್ಪತ್ರೆಯ ಆವರಣದಲ್ಲಿ ಎಲ್ಲಾ ಮಕ್ಕಳಿಗೆ ಜಿಲ್ಲಾಡಳಿತದ ವತಿಯಿಂದ ಶುಭ ಹಾರೈಸಲಾಯಿತು. ಜಿಲ್ಲಾಧಿಕಾರಿ ಜಿ. ಜಗದೀಶ್, ಡಾ ಸುಧೀರ್ ಚಂದ್ರ ಸೂಡಾ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು, ತಹಶೀಲ್ದಾರರು ಮಕ್ಕಳಿಗೆ ಶುಭ ಹಾರೈಸಿದರು. ಡಿ.ಸಿ ಜಿ. ಜಗದೀಶ್ ಡ್ರಾಯಿಂಗ್ ಪುಸ್ತಕ ಮತ್ತು ಚಾಕ್ಲೇಟ್‍ಗಳನ್ನು ಕೊಟ್ಟು ಹುರಿದುಂಬಿಸಿದರು.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಸಿ, ನಮ್ಮ ಜಿಲ್ಲೆಯಲ್ಲಿ 35 ಮಕ್ಕಳು ಕೊರೊನಾ ಸೋಂಕು ಅಂಟಿಸಿಕೊಂಡಿದ್ದರು. ಮಕ್ಕಳಿಗೆ ಉಡುಪಿ ಟಿಎಂಎ ಪೈ, ಕಾರ್ಕಳದ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಎಲ್ಲ ಮಕ್ಕಳು ಸದ್ಯ ಆರೋಗ್ಯವಾಗಿದ್ದಾರೆ. ಮಕ್ಕಳ ಜೊತೆ ಜಿಲ್ಲೆಯಿಂದ ಇಂದು 45 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರದ ನಿಯಮದಂತೆ ವೈದ್ಯರ ಸೂಚನೆಯಂತೆ ಮನೆಯಲ್ಲಿ 14 ದಿನ ಹೋಮ್ ಕ್ವಾರಂಟೈನ್ ಆಗಿರಬೇಕು ಎಂದು ಹೇಳಿದರು.

ಮಕ್ಕಳ ಪೋಷಕರು ಮಾತನಾಡಿ, ಆಸ್ಪತ್ರೆಯಲ್ಲಿ ಮನೆಯ ವಾತಾವರಣ ಇತ್ತು. ಡಾ. ಶಶಿಕಿರಣ್ ಚಿಕಿತ್ಸೆ ಕೊಡುವ ಜೊತೆ ಮಾನಸಿಕವಾಗಿ ಕೂಡ ಸ್ಥೈರ್ಯವನ್ನು ತುಂಬುತ್ತಿದ್ದರು. ಅಕಸ್ಮಾತಾಗಿ ಮಹಾರಾಷ್ಟ್ರದಲ್ಲಿ ಮತ್ತು ದುಬೈಯಲ್ಲಿ ಈ ರೋಗ ಅಂಟಿಕೊಂಡಿತು. ಈಗ ಸಂಪೂರ್ಣವಾಗಿ ಗುಣಮುಖವಾಗಿ ಮನೆಗೆ ಹೋಗುತ್ತಿರುವುದು ಖುಷಿಯಾಗಿದೆ ಎಂದರು.

Comments

Leave a Reply

Your email address will not be published. Required fields are marked *