ಕೊರೊನಾ ತೊಲಗುತ್ತೆಂದು ‘ನರ’ ಬಲಿ ನೀಡಿದ ಅರ್ಚಕ

– ಕನಸಲ್ಲಿ ದೇವರು ಹೇಳಿದನೆಂದ ಭೂಪ
– ರುಂಡ ಕತ್ತರಿಸಿ ಪೂಜೆ ಸಲ್ಲಿಕೆ

ಭುವನೇಶ್ವರ: ಕೊರೊನಾ ತೊಲಗಿಸಲು ಅರ್ಚಕನೋರ್ವ ನರ ಬಲಿ ನೀಡಿರುವ ಆಘಾತಕಾರಿ ಘಟನೆ ನಡೆದಿದೆ.

ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದ ಹಿರಿಯ ಅರ್ಚಕ ಸನ್ಸಾರಿ ಓಝಾ(72) ಈ ಕೃತ್ಯ ಎಸಗಿದ್ದಾನೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಕೊರೊನಾ ವೈರಸ್ ತೊಲಗಿಸುವಂತೆ ಮನುಷ್ಯನನ್ನು ಬಲಿ ಕೊಟ್ಟಿದ್ದಾನೆ. ಸ್ಥಳೀಯ ವ್ಯಕ್ತಿಯ ರುಂಡವನ್ನೇ ಕತ್ತರಸಿ, ಪೂಜೆ ಸಲ್ಲಿಸಿದ್ದಾನೆ. ಕೃತ್ಯ ಎಸಗುತ್ತಿದ್ದಂತೆ ಬುಧವಾರ ರಾತ್ರಿಯೇ ಅರ್ಚಕ ಪೊಲೀಸರಿಗೆ ಶರಣಾಗಿದ್ದಾನೆ.

ಮೃತ ವ್ಯಕ್ತಿಯನ್ನು ಸರೋಜ್ ಕುಮಾರ್ ಪ್ರಧಾನ್(52) ಎಂದು ಗುರುತಿಸಲಾಗಿದ್ದು, ಬಲಿ ನೀಡುವ ಕುರಿತು ದೇವಸ್ಥಾನದಲ್ಲಿ ಅರ್ಚಕ ಹಾಗೂ ಸಂತ್ರಸ್ತನ ಮಧ್ಯೆ ವಾಗ್ವಾದ ನಡೆದಿದೆ. ಇದು ಜಗಳಕ್ಕೆ ತಿರುಗಿದ್ದು, ಓಝಾ ಸಂತ್ರಸ್ತನನ್ನು ತೀಕ್ಷ್ಣವಾದ ಆಯುಧದಿಂದ ಹೊಡೆದಿದ್ದಾನೆ. ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಚಾರಣೆ ವೇಳೆ ಆರೋಪಿ ಪ್ರಕರಣದ ಕುರಿತು ಬಾಯ್ಬಿಟ್ಟಿದ್ದು, ಕನಸಿನಲ್ಲಿ ದೇವರು ಆದೇಶ ನೀಡಿದ ಹಿನ್ನೆಲೆ ಹತ್ಯೆ ಮಾಡಿದೆನೆಂದು ಒಪ್ಪಿಕೊಂಡೆ. ಅಲ್ಲದೆ ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದು ದೇವರು ಹೇಳಿರುವ ಕುರಿತು ಹೇಳಿಕೆ ನೀಡಿದ್ದಾನೆ.

ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಅರ್ಚಕ ಮಾವಿನ ತೋಟಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯೊಂದಿಗೆ ಹಿಂದಿನಿಂದಲೂ ವೈಮನಸ್ಸು ಹೊಂದಿದ್ದ ಎಂದು ತಿಳಿಸಿದ್ದಾರೆ.

ಸೆಂಟ್ರಲ್ ರೇಂಜ್ ಡಿಐಜಿ ಆಶಿಶ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ವಿಪರೀತವಾಗಿ ಕುಡಿದಿದ್ದ. ಮರುದಿನ ಬೆಳಗ್ಗೆ ತನ್ನ ತಪ್ಪಿನ ಅರಿವಾಗಿ ಶರಣಾಗತನಾಗಿದ್ದಾನೆ. ಕೊಲೆಯನ್ನು ತಾನೇ ಮಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವರು ಕನಸಿನಲ್ಲಿ ಬಂದು ಮನುಷ್ಯರನ್ನು ಬಲಿ ನೀಡಿದರೆ ಕೊರೊನಾ ತೊಲಗುತ್ತದೆ ಎಂದಿತು. ಹೀಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಅರ್ಚಕ ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *