ಕಷ್ಟ ಕಾಲಕ್ಕೆಂದು ಕೂಡಿಟ್ಟಿದ್ದ 10 ಸಾವಿರ ರೂ.ನಲ್ಲಿ 20 ಮಂದಿಗೆ ಕಿಟ್ ವಿತರಿಸಿದ ವೃದ್ಧೆ

ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ದಿನದಿಂದ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದಾರೆ. ಈ ವೇಳೆ ಸರಕಾರ, ಸಂಘ ಸಂಸ್ಥೆಗಳು ದಿನಸಿ ಕಿಟ್ ಗಳನ್ನು ವಿತರಿಸಿದ್ದಾರೆ. ಆದರೆ ಶಿವಮೊಗ್ಗದ ಮೆಹಂದಿ ನಗರದ ವೃದ್ಧೆಯೊಬ್ಬರು ಇಂದು ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೃದ್ಧೆ ಪದ್ಮಾವತಿ ಅವರು ಈ ಹಿಂದೆ ಹೊನ್ನಾಳಿಯಲ್ಲಿ ಸಣ್ಣದಾದ ಕ್ಯಾಂಟಿನ್ ನಡೆಸುತ್ತಿದ್ದರು. ಈ ವೇಳೆ ಮುಂದೆ ಕಷ್ಟ ಕಾಲಕ್ಕೆ ಸಹಾಯ ಆಗಲಿ ಎಂದು ಅಲ್ಪ-ಸ್ವಲ್ಪ ಹಣವನ್ನು ಕೂಡಿಟ್ಟಿದ್ದರು. ಆದರೆ ಇದೀಗ ಕೊರೊನಾದಿಂದಾಗಿ ಕೆಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು.

ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಇದನ್ನು ಗಮನಿಸಿದ್ದ ವೃದ್ಧೆ ಪದ್ಮಾವತಿ ಅವರು ಇವರ ಕಷ್ಟದ ಮುಂದೆ ನನ್ನ ಕಷ್ಟ ಏನೂ ಅಲ್ಲ. ಮುಂದೆ ನಾನು ಬದುಕಿದ್ದರೆ ನೋಡಿದರಾಯ್ತು ಎಂದು ತೀರ್ಮಾನಿಸಿ ಸುಮಾರು 10 ಸಾವಿರ ರೂ. ವೆಚ್ಚದಲ್ಲಿ 20 ಮಂದಿ ಅಂಗವಿಕಲರು, ವೃದ್ಧರು ಸೇರಿದಂತೆ ಬಡವರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *