ಮತ್ತೊಂದು ಕೊರೊನಾ ಹಬ್ ಆಗುತ್ತಾ ಡಿಜೆ ಹಳ್ಳಿ?

ಬೆಂಗಳೂರು: ಪಾದರಾಯನಪುರ ಆಯ್ತು, ಶಿವಾಜಿನಗರ ಆಯ್ತು ಈಗ ಡಿಜೆ ಹಳ್ಳಿ ಕೊರೊನಾ ಹಬ್ ಆಗುತ್ತಾ ಎಂಬ ಅನುಮಾನ ಶುರುವಾಗಿದೆ. ರೋಗಿ ನಂ 2180 ಹಿಸ್ಟರಿ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತಿದೆ.

ಹೌದು. ಬೆಂಗಳೂರಿನ ಗ್ರೀನ್ ಝೂನ್ ವಾರ್ಡ್ ಡಿಜೆ ಹಳ್ಳಿ. ಆದರೆ ರೋಗಿ-2180 ನಿಂದಾಗಿ ಈಗ ಕಂಟೈನ್ಮೆಂಟ್ ಝೋನ್ ಆಗಿದೆ. 34 ವರ್ಷದ ಸೊಂಕಿತ ಮಹಿಳೆ ಸೋಮವಾರ ಉಸಿರಾಟದ ಸಮಸ್ಯೆ ಎಂದು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಬೋರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ.

ಮೂಲತಃ ಡಿಜೆಹಳ್ಳಿ ಸ್ಲಂ ಒಂದರಲ್ಲಿ ವಾಸವಿರುವ ಈಕೆ ಸ್ಲಂ ಬೋರ್ಡ್ ನವರು ನೀಡಿರುವ ಬಿಲ್ಡಿಂಗ್ ನಲ್ಲಿ ವಾಸವಿದ್ರು. ಇಲ್ಲಿ ನಾಲ್ಕು ಬಿಲ್ಡಿಂಗ್ ಇದ್ದು, ಒಂದೇ ಬಿಲ್ಡಿಂಗ್ ನಲ್ಲಿ ನಾಲ್ಕು ಮನೆಗಳಿವೆ. ಇದೀಗ ಈ ನಾಲ್ಕು ಬಿಲ್ಡಿಂಗ್ ನಲ್ಲಿ ವಾಸವಾಗಿದ್ದ ಜನರಿಗೆ ಭಯ ಶುರುವಾಗಿದೆ. ಈಕೆ ಸೋಂಕಿನ ಮೂಲ ಏನು ಎಂಬುದು ಗೊತ್ತಾಗುತ್ತಿಲ್ಲ. ಈಕೆಯ ಕೇಸ್ ಹಿಸ್ಟರಿ ಭಯಂಕರವಾಗಿದ್ದು ಆರೋಗ್ಯಾಧಿಕಾರಿಗಳಲ್ಲಿ ಆತಂಕ ಹೆಚ್ಚಿಸಿದೆ.

ಮಹಿಳೆಗೆ ಸೊಂಕು ಪತ್ತೆಯಾಗಿರುವ ಬಗ್ಗೆ ತಲೆಕೆಡಿಸಿಕೊಂಡ ಆರೋಗ್ಯಾಧಿಕಾರಿಗಳು, ಕೇಸ್ ಹಿಸ್ಟರಿ ಪತ್ತೆ ಮಾಡಿದ್ದಾರೆ. 10 ದಿನದ ಹಿಂದೆ ರಾಮನಗರದ ಚನ್ನಪಟ್ಟಣಕ್ಕೆ ಮಹಿಳೆ ಪ್ರಯಾಣ ಮಾಡಿದ್ದರು. ಆದರೆ ಯಾವುದರಲ್ಲಿ ಪ್ರಯಾಣ ಮಾಡಿದ್ರು, ಏಕೆ ಹೋಗಿದ್ರು ಯಾರನ್ನು ಭೇಟಿ ಮಾಡಿದ್ರು, ಅಲ್ಲಿ ಏನಾದ್ರು ಸೋಂಕು ಬಂತಾ ಎಂಬ ಅನುಮಾನ ಹುಟ್ಟಿದೆ.

ಈ ಮಹಿಳೆ ತರಕಾರಿ ವ್ಯಾಪಾರ ಮಾಡ್ತಾ ಇದ್ದು, ಯಾವೆಲ್ಲಾ ಜಾಗದಲ್ಲಿ ಓಡಾಡಿದ್ದಾರೆ ಎಂಬ ತನಿಖೆ ಆರೋಗ್ಯಾಧಿಕಾರಿಗಳು ಮಾಡ್ತಾ ಇದ್ದಾರೆ. ಇಲ್ಲಿ ಸಮುದಾಯ ಕೊರೊನಾ ಹಬ್ಬಿದೆಯಾ ಎಂಬ ಆತಂಕ ಕೂಡ ಆರೋಗ್ಯಾಧಿಕಾರಿಗಳಲ್ಲಿ ಮೂಡಿದೆ. ಈ ಮಹಿಳೆಯದ್ದು ಅವಿಭಕ್ತ ಕುಟುಂಬವಾಗಿದ್ದು, ನಾಲ್ವರು ಮಕ್ಕಳು ಹಾಗೂ ತಂಗಿ ಮಕ್ಕಳು ಸೇರಿ ಒಟ್ಟು 6 ಜನ ವಾಸಿಸುತ್ತಿದ್ದಾರೆ. ಇವರು ಡಿಜೆ ಹಳ್ಳಿಯ ಪಂಚಾತ್ ಹಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಹೀಗಾಗಿ ತರಕಾರಿ ವ್ಯಾಪಾರ ಮಾಡುವಾಗ ಸೋಂಕಿನ ಲಕ್ಷಣ ಇರುವವರನ್ನ ಮಾತಾಡಿಸಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ಮಹಿಳೆಯ ಮನೆಯಲ್ಲಿ ಮಗಳ ಎಂಗೇಜ್ ಮೆಂಟ್ ಆಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾಗಡಿ ಮೂಲದವರು ಬಂದಿದ್ದರು. ಈ ವೇಳೆ ಸೋಂಕು ಹರಡಿದೆಯಾ ಎಂಬ ಆತಂಕ ಕೂಡ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ.

ಒಟ್ಟಿನಲ್ಲಿ ಮಹಿಳೆಯಿಂದಾಗಿ ಡಿಜೆಹಳ್ಳಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಾ, ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳು ನಯಾ ಪ್ಲಾನ್ ಹುಡುಕುತ್ತಾರ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *