ದಯವಿಟ್ಟು ನಿಮ್ಮ ಮನೆ ಹೆಣ್ಮಕ್ಕಳ ಫೋಟೋವನ್ನ ಆನ್‍ಲೈನಲ್ಲಿ ಅಪ್ಲೋಡ್ ಮಾಡ್ಬೇಡಿ: ಭಾಸ್ಕರ್ ರಾವ್

– ಸೈಬರ್ ಕೂಡ ಮನೆಯಿದ್ದಂಗೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ
– ಪೊಲೀಸರಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ಠಾಣೆಗಳಿಗೆ ನಿರ್ದೇಶನ

ಬೆಂಗಳೂರು: ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಲಾಕ್‍ಡೌನ್ ಸಂದರ್ಭದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಎಲ್ಲರೂ ಮನೆಯಲ್ಲೇ ಕೂತು ಸೈಬರ್ ಕ್ರೈಂ ಮಾಡಿದ್ದಾರೆ. ಕೆಲವರು ತರ್ಲೆ ಮಾಡಲು, ಫನ್ ಮಾಡಲು ಆನ್‍ಲೈನ್‍ನಲ್ಲಿ ಪಾಠ ಮಾಡುತ್ತಿದ್ದಾಗ ಅಶ್ಲೀಲ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಬಂದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಸೈಬರ್ ಕೂಡ ಮನೆಯಿದ್ದಂತೆ ಅದಕ್ಕೆ ಕಿಟಕಿ ಬಾಗಿಲು ಇರುತ್ತೆ. ಮನೆಯನ್ನ ಹೇಗೆ ಕಾಪಾಡುತ್ತೀವೋ ಹಾಗೆ ಆನ್‍ಲೈನ್ ಬಗ್ಗೆನೂ ಎಚ್ಚರಿಕೆ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ನಿಮ್ಮ ಮನೆಯ ಅಕ್ಕ-ತಂಗಿಯರು, ಪತ್ನಿಯರು, ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಹಾಕಬೇಡಿ.  ಕೆಲವರು ನಿಮ್ಮ ಮನೆಯವರ ಫೋಟೋವನ್ನ ಅಶ್ಲೀಲವಾಗಿ ಸೃಷ್ಟಿಸುತ್ತಾರೆ. ಇದರಿಂದ ನೀವು ಆತಂಕ ಪಡುತ್ತೀರ. ಹೀಗಾಗಿ ಅನಗತ್ಯವಾಗಿ ನಿಮ್ಮ ಹೆಣ್ಣು ಮಕ್ಕಳ ಫೋಟೋವನ್ನು ದಯವಿಟ್ಟು ಆನ್‍ಲೈನ್‍ನಲ್ಲಿ ಅಪ್ಲೋಡ್ ಮಾಡಬೇಡಿ. ಇದರಿಂದ ನಿಮಗೆ ಅವಮಾನ ಮಾಡುತ್ತಾರೆ. ಇಂತಹ ಘಟನೆಗಳು ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಕೂತವರಿಂದ ನಡೆಯುತ್ತದೆ ಎಂದು ತಿಳಿಸಿದರು.

ಪೊಲೀಸ್ ಠಾಣೆಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕೊರೊನಾ ಜೊತೆ ಹೋರಾಟ ಮಾಡುತ್ತಿದ್ದೇವೆ. ನಾವು ಮಾರ್ಚ್ ನಿಂದಲೇ ಎಲ್ಲಾ ಪೊಲೀಸ್ ಠಾಣೆಯಲ್ಲೂ ಮಾಸ್ಕ್ ಧರಿಸುವುದು, ಬಿಸಿ ನೀರಿನಲ್ಲಿ ಕೈ ತೊಳೆಯುವುದರ ಬಗ್ಗೆ ಎಚ್ಚರಿಕೆ ನೀಡಿದ್ದೆವು. ಈಗ ಮಹಾಮಾರಿ ಎಲ್ಲಾ ಕಡೆ ಬಲಿ ತೆಗೆದುಕೊಳ್ಳುತ್ತಿದ್ದರಿಂದ ಪೊಲೀಸರು ಸುರಕ್ಷಿತರಾಗಿರಬೇಕು ಎಂದು ತಿಳಿಸಿದರು.

ಒಬ್ಬರನೊಬ್ಬರು ಕಾಪಾಡಿಕೊಳ್ಳಬೇಕು, ಹೆಡ್‌ಕಾನ್‌ಸ್ಟೇಬಲ್ ಅವರಿಗಿಂತ ಕೆಳ ಸಿಬ್ಬಂದಿಯನ್ನು ಕಾಪಾಡಿಕೊಳ್ಳಬೇಕು. ಎಎಸ್‍ಐ ತಮ್ಮ ಕೆಳ ಸಿಬ್ಬಂದಿಯನ್ನು ಕಾಪಾಡಬೇಕು. ಹೀಗೆ ಒಬ್ಬರಿಗೊಬ್ಬರು ಸಹಕಾರವನ್ನು ನೀಡಬೇಕು. ಸರ್ಕಾರದ ಬಲ ನಾವು, ನಾವೇ ಸೋಂಕಿತರಾದರೆ ತೊಂದರೆಯಾಗುತ್ತದೆ. ಪೊಲೀಸ್ ಠಾಣೆಯಲ್ಲೂ ಹಗ್ಗ ಕಟ್ಟಿ ಅಂತರ ಕಾಪಾಡಿಕೊಳ್ಳಬೇಕು. ಬಂದವರಿಗೆ ಸ್ಯಾನಿಟೈಸರ್ ನೀಡಬೇಕು. ಅನಗತ್ಯ ವಸ್ತುಗಳನ್ನ ವಿಲೇವಾರಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ಪೊಲೀಸ್ ಠಾಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಮುಖ್ಯವಾಗಿ ಎಲ್ಲೆಂದರಲ್ಲಿ ಉಗುಳಬಾರದು. ಸದಾ ಬಿಸಿ ನೀರು ಕುಡಿಯಲು ಸೂಚನೆ ನೀಡಿದ್ದೇನೆ. ಕೆಲವೊಂದು ಪೊಲೀಸ್ ಠಾಣೆಯಲ್ಲಿ ವಾಷಿಂಗ್ ಮೆಷಿನ್ ಕೂಡ ಇಡುತ್ತಿದ್ದೇವೆ. ಈ ಮೂಲಕ ಸ್ವಚ್ಛ ಬಟ್ಟೆಗಳನ್ನ ಬಳಸಲು ಸೂಚನೆ ನೀಡಲಾಗಿದೆ. ಸೋಂಕಿತ ಪೊಲೀಸರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕುಟುಂಬಕ್ಕೂ ಒಳ್ಳೆಯ ಕಡೆ ಕ್ವಾರೆಂಟೈನ್ ಮಾಡಿಸಿದ್ದೇವೆ. ಸೋಂಕಿತ ಸಿಬ್ಬಂದಿಗೆ ಎಲ್ಲಾ ರೀತಿಯಲ್ಲಿ ಸೌಲಭ್ಯ ಕೊಡುತ್ತೇವೆ ಎಂದು ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *