ಶಿವಮೊಗ್ಗದಲ್ಲಿ ‘ಕೈ’ ನಾಯಕಿ ವಿರುದ್ಧ ಎಫ್‍ಐಆರ್

– ದೂರು ದಾಖಲಿಸಿಕೊಂಡ ಪಿಎಸ್‍ಐ ಅಮಾನತಿಗೆ ಆಗ್ರಹ

ಶಿವಮೊಗ್ಗ: ಎಐಸಿಸಿ ಅಧ್ಯಕ್ಷೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಜಿಲ್ಲೆಯ ಸಾಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು, ಪ್ರಧಾನಿ ಕೊರೊನಾ ಕೇರ್ ಫಂಡ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಟ್ವಿಟ್ಟರ್‌ನಲ್ಲಿ ಹಾಕಲಾಗಿದ್ದ ಸಂದೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ವಕೀಲರೊಬ್ಬರು ಸಾಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ದೂರು ದಾಖಲು ಮಾಡಿಕೊಂಡ ಪಿಎಸ್‍ಐಯನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಕೇವಲ ಕೇಸ್ ಅಂದಿದ್ರೆ ಓಕೆ. ಆದರೆ ಸೋನಿಯಾ ಗಾಂಧಿ ಮತ್ತು ಅವರ ಟ್ವಿಟ್ಟರ್ ಖಾತೆ ನಿರ್ವಹಿಸುವ ಸಿಬ್ಬಂದಿಯ ಮೇಲೂ ಎಫ್‍ಐಆರ್ ದಾಖಲಾಗಿದೆ. ಸಾಗರದ ವಕೀಲ ಪ್ರವೀಣ್ ಎಂಬವರು ಎಐಸಿಸಿ ಅಧ್ಯಕ್ಷೆ ಮತ್ತು ಅವರ ಟ್ವಿಟ್ಟರ್ ಖಾತೆ ನಿರ್ವಹಿಸುವ ಸಿಬ್ಬಂದಿಯ ವಿರುದ್ಧ ದೂರು ನೀಡಿದ್ದಾರೆ. ಕಾಂಗ್ರೆಸ್ ಐಎನ್‍ಸಿ, ಪ್ರಧಾನಿ ನರೆಂದ್ರ ಮೋದಿ ಅವರು ಪಿಎಂ ಕೇರ್ ನಿಧಿಗೆ ಬಂದ ಹಣದ ದುರುಪಯೋಗ ಮಾಡುತ್ತಿದ್ದಾರೆಂದು ಟ್ವೀಟ್ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ ಫಂಡ್ ಸದ್ಬಳಕೆ ಮಾಡುತ್ತಿಲ್ಲ.. ಬದಲಾಗಿ ಬಂದಿರುವ ಹಣವನ್ನು ವಿದೇಶ ಪ್ರಯಾಣಕ್ಕೆ ಬಳಸುತ್ತಿದೆ. ಪಿಎಂ ಕೇರ್ ಫಂಡ್ ಅನ್ನು ಪ್ರಧಾನಿ ಮೋದಿ ಅವರಿಗೋಸ್ಕರ ಮಾಡಲಾಗಿದೆ. ದಾನಿಗಳಿಂದ ಬಂದ ಹಣವನ್ನು ಯಾವುದೇ ಜನ ಸಾಮಾನ್ಯರಿಗೆ ಬಳಸುತ್ತಿಲ್ಲವೆಂದು ಟ್ವಿಟ್ಟರ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ವಕೀಲ ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ.

ಪಿಎಂ ಕೇರ್ ಫ್ರಾಡ್ ಎಂಬ ಶೀರ್ಷಿಕೆಯೊಂದಿಗೆ ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಗಾಳಿ ಸುದ್ದಿಯನ್ನು ಕಾಂಗ್ರೆಸ್ ಮಾಡಿದೆ. ಈ ಎಲ್ಲಾ ಟ್ವೀಟ್‍ಗಳು ಉದ್ದೇಶ ಪೂರ್ವಕವಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡುವಂತಿವೆ. ಜೊತೆಗೆ ನಾಗರೀಕರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಸುಳ್ಳು ಸಂದೇಶವಾಗಿದೆ ಎಂದು ವಕೀಲ ಪ್ರವೀಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೇ ಪಿಎಸ್‍ಐ ಎಫ್‍ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಜೊತೆಗೆ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಪಿಎಸ್‍ಐ ಅವರನ್ನು ಅಮಾನತು ಮಾಡುವಂತೆ ಮನವಿ ಸಲ್ಲಿಸಿದೆ.

ದೆಹಲಿಯ ಐಎನ್‍ಸಿ ಕಚೇರಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬಿಡುಗಡೆ ಆಗಿದೆ ಎನ್ನಲಾದ ಸುದ್ದಿಯನ್ನು ತಿರುಚಲಾಗಿದೆ. ವಕೀಲ ಕೆ.ವಿ.ಪ್ರವೀಣ್ ಕುಮಾರ್ ಅವರು ನೈಜ ಸುದ್ದಿಗೆ ಸುಳ್ಳು ಅಂಶಗಳನ್ನು ಸೇರಿಸಿ ದೂರು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *