ದಲಿತರು ಮಾಡಿದ ಅಡುಗೆ ಎಂದು ಊಟ ನಿರಾಕರಿಸಿದ ಕ್ವಾರಂಟೈನ್‍ನಲ್ಲಿದ್ದ ಯುವಕ

ಡೆಹ್ರಾಡೂನ್: ಇತ್ತೀಚೆಗೆ ನಡೆದ ಘಟನೆಯೊಂದು ಜಾತಿವಾದ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಬಹಿರಂಗಗೊಳಿಸಿದೆ. ದಲಿತರು ಮಾಡಿದ ಅಡುಗೆ ಎಂದು 23 ವರ್ಷದ ಯುವಕನೊಬ್ಬ ಊಟ ಮಾಡಲು ನಿರಾಕರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಯುವಕ ದಿನೇಶ್ ಚಂದ್ರ ಮಿಲ್ಕನಿ ಕ್ವಾರಂಟೈನಲ್ಲಿದ್ದು, ದಲಿತರು ಮಾಡುವ ಅಡುಗೆಯೆಂದು ಯಾವುದನ್ನೂ ತಿನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಿನೇಶ್, ಅಳಿಯ ಹಾಗೂ ಮತ್ತೆ ಮೂವರನ್ನು ಮೇ 15ರಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಬ್ಬರಿಗೆ ಅಡುಗೆ ಮಾಡಿ ಕೊಡುವವರನ್ನು ಭವಾನಿ ದೇವಿ ಎಂದು ಗುರುತಿಸಲಾಗಿದೆ.

ಭವಾನಿ ದೇವಿಯವರು ದಲಿತ ಸಮುದಾಯದ ಸದಸ್ಯರಾಗಿದ್ದಾರೆ. ಸದ್ಯ ಅವರು ಕ್ವಾರಂಟೈನ್ ನಲ್ಲಿ ಇರುವ ಎಲ್ಲರಿಗೂ ಅಡುಗೆ ಮಾಡಿಕೊಡುತ್ತಿದ್ದರು. ಹಾಗೆಯೇ ಮೇ 15ರಂದು ಕೂಡ ಎಲ್ಲರಿಗೂ ಅಡುಗೆ ಮಾಡಿಕೊಟ್ಟಿದ್ದರು. ಇದನ್ನು ಎಲ್ಲರೂ ಊಟ ಮಾಡಿದರೆ, ದಿನೇಶ್ ಮಾತ್ರ ತಿನ್ನಲು ನಿರಾಕರಿಸಿದ್ದಾನೆ. ಅಲ್ಲದೆ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿದ್ದಾನೆ.

ಈ ವಿಚಾರ ಸ್ವಲ್ಪ ತಡವಾಗಿ ದೇವಿಯವರಿಗೆ ಗೊತ್ತಾಯಿತು. ನಾನು ನೀರು ಮುಟ್ಟಿದರೆ ದಿನೇಶ್ ಅದನ್ನು ಸ್ವೀಕರಿಸಲ್ಲ ಎಂದ ಸತ್ಯ ಅವರಿಗೆ ಅರಿವಾಯಿತು. ಇತ್ತ ಗ್ರಾಮದ ಮುಖ್ಯಸ್ಥ ಮುಕೇಶ್ ಚಂದ್ರ ಬುದ್ಧ್ ಅವರಿಗೂ ದಿನೇಶ್ ನಡತೆಯ ಬಗ್ಗೆ ತಿಳಿಯಿತು.

ನಾವು ದಿನೇಶ್ ಬಳಿ ಊಟ ಮಾಡಲು ಹೇಳಿದಾಗ ಆತ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿ ತಪ್ಪಿಸಿಕೊಂಡನು. ಕೂಡಲೇ ನಾವು ದೇವಿ ಅವರ ಕೈಯಲ್ಲಿ ನೀರು ಕೊಟ್ಟು ಕುಡಿಯಲು ಹೇಳಿದೆವು. ಆಗ ಆತ ನೀರು ಕುಡಿಯಲು ಕೂಡ ನಿರಾಕರಿಸಿದ್ದಾನೆ. ಈ ವೇಳೆ ಆತ ಜಾತಿ ತಾರತಮ್ಯ ಮಾಡುತ್ತಿದ್ದಾನೆ ಎಂದು ತಿಳಿದು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್, ನಾನು ಯಾವತ್ತೂ ಮನೆಯಲ್ಲಿ ಮಾಡುವ ಆಹಾರವಷ್ಟೇ ಸೇವಿಸುತ್ತೇನೆ. ಹೊರಗಡೆ ಆಹಾರವನ್ನು ಸೇವಿಸಲ್ಲ ಎಂದು ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆದಿದ್ದಾನೆ.

Comments

Leave a Reply

Your email address will not be published. Required fields are marked *