ಪಾರ್ಕಿಂಗ್ ಸ್ಥಳದಿಂದ ಬೈಕ್ ಕದಿಯುತ್ತಿದ್ದ ನಾಲ್ವರು ಖದೀಮರು ಅಂದರ್

ಮಡಿಕೇರಿ: ಪಾರ್ಕಿಂಗ್ ಸ್ಥಳಗಳಿಂದ ಬೈಕ್ ಕದಿಯುತ್ತಿದ್ದ ನಾಲ್ವರು ಖದೀಮರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ಕೊಡಗಿನ ಮೂರ್ನಾಡು, ಮೊಣ್ಣಂಗೇರಿ ಮತ್ತು ಐಕೊಳ ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳಾದ ಅರುಣ, ಸಚಿನ್, ಕಾರ್ತಿಕ್ ಮತ್ತು ವಾಸು ಬಂಧಿತ ಆರೋಪಿಗಳು. ಖಾಸಗಿ ಬಸ್‍ಗಳಲ್ಲಿ ಕ್ಲೀನರ್ ಆಗಿರುವ ಖದೀಮರು, ಜನರು ಬೈಕ್ ಪಾರ್ಕ್ ಮಾಡಿ ಬೇರೆಡೆ ಹೋಗುತ್ತಿದ್ದುದನ್ನು ಗಮನಿಸಿ ಬೈಕುಗಳನ್ನು ಕದಿಯುತ್ತಿದ್ದರು. ಆರೋಪಿಗಳು ಜಿಲ್ಲೆಯ ವಿವಿಧೆಡೆ ಈ ಕೃತ್ಯ ಎಸಗಿದ್ದಾರೆ.

ಇತ್ತೀಚೆಗೆ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಿಂದ ಬೈಕ್ ಎಗರಿಸುತ್ತಿದ್ದ ವೇಳೆ ಇಬ್ಬರು ಖದೀಮರು ಸಿಕ್ಕಿ ಬಿದ್ದಿದ್ದರು. ಪೊಲೀಸರು ಕೂಡಲೇ ಖದೀಮರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿ ಬಾಯ್ಬಿಡಿಸಿದ್ದಾರೆ. ಈ ವೇಳೆ ಮತ್ತಿಬ್ಬರು ಇವರ ಗ್ಯಾಂಗ್‍ನಲ್ಲಿರುವುದು ತಿಳಿದಿದೆ. ಕೂಡಲೇ ಎಚ್ಚೆತ್ತುಕೊಂಡ ಮಡಿಕೇರಿ ನಗರ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ನಾಲ್ವರನ್ನು ಹೆಡೆಮುರಿಕಟ್ಟಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳವು ಕೆಲಸಕ್ಕೆ ಇಳಿದಿದ್ದ ಕಳ್ಳರು ಇತ್ತೀಚೆಗೆ ಒಂದು ಪಿಸ್ತೂಲ್‍ನ್ನೂ ಸಹ ಎಗರಿಸಿದ್ದರು. ಪೊಲೀಸರ ವಿಚಾರಣೆ ವೇಳೆ ಇದೆಲ್ಲವೂ ಬಟಾಬಯಲಾಗಿದೆ. ಹೆಸರಿಗಷ್ಟೇ ಬಸ್ ಕ್ಲೀನಿರ್ ಆಗಿದ್ದ ಇವರು, ಬೈಕ್ ಕಳವು ಜೊತೆಗೆ ಇತರೆ ಚಿಕ್ಕಪುಟ್ಟ ಕಳ್ಳತನದ ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದರು ಎಂದು ಕೊಡಗು ಎಸ್‍ಪಿ ಸುಮನ್ ಡಿ ಪನ್ನೇಕರ್ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *