11 ವರ್ಷದ ದಾಂಪತ್ಯ ಅಂತ್ಯ – ಡಿವೋರ್ಸ್ ನೋಟಿಸ್ ನೀಡಿದ ಸಿದ್ದಿಕಿ ಪತ್ನಿ

ಮುಂಬೈ: ಬಾಲಿವುಡ್ ಜನಪ್ರಿಯ ನಟ ನವಾಜುದ್ದೀನ್ ಸಿದ್ದಿಕಿ ಕುಟುಂಬ ಕ್ವಾರಂಟೈನ್‍ನಲ್ಲಿ ಇದೆ. ಆದರೆ ಇದೇ ವೇಳೆ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ವಿಚ್ಛೇದನ ಕೋರಿ ನೋಟಿಸ್ ಕಳುಹಿಸಿದ್ದಾರೆ.

ಪತ್ನಿ ಆಲಿಯಾ ಸಿದ್ದಿಕಿ 11 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಆಲಿಯಾ ಸಿದ್ದಿಕಿ ಈ ತಿಂಗಳು ತಮ್ಮ ಪತಿಗೆ ವಾಟಪ್ಸ್ ಮತ್ತು ಇಮೇಲ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಪ್ರಸ್ತುತ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಹುಟ್ಟೂರಿಗೆ ಮರಳಿದ್ದು, ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿದ ಆಲಿಯಾ ಸಿದ್ದಿಕಿ, “ಹೌದು, ನಾನು ಅವರಿಗೆ ವಿಚ್ಛೇದನಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದೇನೆ. ಆದರೆ ಅವರಿಂದ ನನಗೆ ಯಾವುದೇ ಉತ್ತರ ಇನ್ನೂ ಬಂದಿಲ್ಲ” ಎಂದು ಹೇಳಿದರು. ವಿಚ್ಛೇದನಕ್ಕೆ ಕಾರಣ ಕೇಳಿದ್ದಕ್ಕೆ, “ನಾನು ಈಗ ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ನಮ್ಮ ಮಧ್ಯೆ ಸಮಸ್ಯೆಗಳಿವೆ. ಈ ಲಾಕ್‍ಡೌನ್ ಸಂದರ್ಭದಲ್ಲಿ ನಾನು ನಮ್ಮ ದಾಂಪತ್ಯ ಜೀವನವನ್ನು ಕೊನೆಯಾಗಿಸಬೇಕು ಎಂದು ಯೋಚಿಸುತ್ತಿದ್ದೆ. ಅವರು ಮುಜಫ್ಫರ್ ಪುರಕ್ಕೆ ತೆರಳುವ ಮೊದಲೇ ನೋಟಿಸ್ ಕಳುಹಿಸಿದ್ದೇನೆ. ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ನಾನು ಈಗ ಕಾನೂನು ಮಾರ್ಗದ ಮೂಲಕ ಹೋಗುತ್ತಿದ್ದೇನೆ” ಎಂದು ತಿಳಿಸಿದರು.

ಕೊರೊನಾ ಲಾಕ್‍ಡೌನ್‍ನಿಂದ ಸ್ಪೀಡ್ ಪೋಸ್ಟ್ ಮಾಡಲು ಸಾಧ್ಯವಾಗದ ಕಾರಣ ಮೇ 7 ರಂದು ನವಾಜುದ್ದೀನ್ ಸಿದ್ದಿಕಿ ಅವರಿಗೆ ಇ-ಮೇಲ್ ಮತ್ತು ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಆಲಿಯಾ ಸಿದ್ದಿಕಿ ಸಹ ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಆದರೂ ಸಿದ್ದಿಕಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಆಲಿಯಾ ಅವರ ವಕೀಲ ಅಭಯ್ ಸಹೈ ಸ್ಪಷ್ಟಪಡಿಸಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಮತ್ತು ಆಲಿಯಾ 2009ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದವರು ಉತ್ತರಪ್ರದೇಶದ ಮುಜಫ್ಫರ್ ಪುರದ ಬುಧಾನಾದಲ್ಲಿರುವ ತಮ್ಮ ಹುಟ್ಟೂರಿನಲ್ಲಿದ್ದಾರೆ. ಲಾಕ್‍ಡೌನ್ ನಿರ್ಬಂಧದ ನಡುವೆ ಮುಂಬೈಯಲ್ಲಿದ್ದ ನವಾಜುದ್ದಿನ್ ಸಿದ್ದಿಕಿ ಪಾಸ್ ಪಡೆದು ಬುಧಾನಾಗೆ ತೆರಳಿದ್ದಾರೆ. ಲಾಕ್‍ಡೌನ್ ನಡುವೆಗೆ ಹುಟ್ಟೂರಿಗೆ ಹೋಗಲು ಕಾರಣ ಏನೆಂಬುದನ್ನು ಟ್ವಿಟ್ಟರಿನಲ್ಲಿ ನವಾಜುದ್ದೀನ್ ತಿಳಿಸಿದ್ದಾರೆ.

“ಇತ್ತೀಚೆಗೆ ನನ್ನ ಕಿರಿಯ ತಂಗಿಯನ್ನು ಕಳೆದುಕೊಂಡಿದ್ದೇನೆ. ಇದರಿಂದಾಗಿ ನನ್ನ 71 ವರ್ಷದ ಅಮ್ಮ ಎರಡು ಭಾರಿ ಆತಂಕದಿಂದ ಆಘಾತಕ್ಕೆ ಒಳಗಾಗಿದ್ದರು. ರಾಜ್ಯ ಸರ್ಕಾರ ನೀಡಿರುವ ಎಲ್ಲ ಮಾರ್ಗದರ್ಶಿಗಳನ್ನೂ ನಾವು ಪಾಲಿಸುತ್ತಿದ್ದೇವೆ. ನಾವು ಬುಧಾನಾನಲ್ಲಿ 14 ದಿನ ಹೋಮ್ ಕ್ವಾರಂಟೈನ್‍ನಲ್ಲಿದ್ದೇವೆ. ದಯವಿಟ್ಟು ನೀವು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ” ಎಂದು ನವಾಜುದ್ದೀನ್ ಸಿದ್ದಿಕಿ ಟ್ವಿಟ್ಟರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *