ಪೋಷಕರು, ಅಪ್ರಾಪ್ತ ಮಗಳ ಶವ ಮನೆಯಲ್ಲೇ ಪತ್ತೆ – ಕೊಲೆಗೂ ಮುನ್ನ ಅತ್ಯಾಚಾರದ ಆರೋಪ

– ತೋಟದಲ್ಲಿ ಪತಿ, ಮನೆಯ ಹೊರಗೆ ಪತ್ನಿ ಶವ
– ಮನೆಯೊಳಗೆ ಅಪ್ರಾಪ್ತ ಮಗಳ ಮೃತದೇಹ ಪತ್ತೆ

ಲಕ್ನೋ: ವೃದ್ಧ ದಂಪತಿ ಮತ್ತು ಅವರ 15 ವರ್ಷದ ಮಗಳು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯಲ್ಲಿ ನಡೆದಿದೆ.

55 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ ಮತ್ತು ಅಪ್ರಾಪ್ತ ಮಗಳು ಮೃತರು ಎಂದು ಗುರುತಿಸಲಾಘಿದೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ತಿ ವಿವಾದ ಅಥವಾ ಕುಟುಂಬ ಜಗಳದಿಂದ ಕೊಲೆ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಏನಿದು ಪ್ರಕರಣ?
ಇಂದು ಮುಂಜಾನೆ ಗ್ರಾಮದಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೂವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಮೃತದೇಹ ಹೊಲದಲ್ಲಿ ಪತ್ತೆಯಾಗಿದೆ. ಅವರ ಪತ್ನಿಯ ಮೃತದೇಹ ಮನೆಯ ಹೊರಗೆ ಪತ್ತೆಯಾಗಿದೆ. ಇನ್ನೂ ಅಪ್ರಾಪ್ತ ಹುಡುಗಿಯ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೀಪೇಂದ್ರ ನಾಥ್ ಚೌಧರಿ ಹೇಳಿದ್ದಾರೆ.

ಮೃತ ದಂಪತಿಯ 29 ವರ್ಷದ ಮಗ ತನ್ನ ಮಕ್ಕಳು ಮತ್ತು ಪತ್ನಿಯ ಜೊತೆ ಗ್ರಾಮದ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದಾನೆ. ಈ ಕುರಿತು ಮಗ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ ಯಾವುದೇ ಶಂಕಿತನ ಹೆಸರನ್ನು ಸೂಚಿಸಿಲ್ಲ. ಇನ್ನೂ ದಂಪತಿಯ ಎರಡನೇ ಮಗ ಮುಂಬೈನಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಫೋನ್ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಅಪ್ರಾಪ್ತೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಎಸಗಲಾಗಿದೆ ಎಂದು ಮೃತ ದಂಪತಿಯ ಕುಟುಂಬದವರು ಆರೋಪಿಸಿದ್ದಾರೆ. ಮೃತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *