ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದು, ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದೆ: ಕುಂಬ್ಳೆ

– ನಿಸ್ವಾರ್ಥ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಸೆಲ್ಯೂಟ್
– ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ಕೊರೊನಾ ವಿರುದ್ಧ ಗೆಲ್ಲೋಣ

ಬೆಂಗಳೂರು: ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಅವರಿಗೆ ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆಯವರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ತಿಳಿಸುವ ವಿಚಾರವಾಗಿ ಸಂಸದೆ ಸುಮಲತಾ ಅವರು ಅನಿಲ್ ಕುಂಬ್ಳೆ ಅವರನ್ನು ನಾಮೀನೇಟ್ ಮಾಡಿದ್ದು, ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿರುವ ಕುಂಬ್ಳೆ ಅವರು, ಕೊರೊನಾ ವಿರುದ್ಧದ ಹೋರಾಟವನ್ನು ಟೆಸ್ಟ್ ಕ್ರಿಕೆಟ್‍ಗೆ ಹೋಲಿಸಿದ್ದಾರೆ. ಜೊತೆಗೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ತಾವು ಮಾತನಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಅನಿಲ್ ಕುಂಬ್ಳೆ, ನನ್ನನ್ನು ಇದಕ್ಕೆ ನಾಮೀನೇಟ್ ಮಾಡಿದ ಸುಮಲತಾ ಮೇಡಂಗೆ ಧನ್ಯವಾದಗಳು, ಈ ಸಮಯದಲ್ಲಿ ನಾನು, ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸ್ವಯಂ ಸೇವಕರಿಗೆ, ಪೊಲೀಸರು ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನೀವು ಎಲ್ಲರೂ ಅದ್ಭುತವಾದ ಕೆಲಸ ಮಾಡುತ್ತಿದ್ದೀರಾ ಎಂದು ಹೇಳಿದ್ದಾರೆ.

ನಾವೆಲ್ಲ ಒಟ್ಟಿಗೆ ಸೇರಿ ಒಗಟ್ಟಿನಿಂದ ಈ ಸೋಂಕಿನ ವಿರುದ್ಧ ಹೋರಾಡಬೇಕಿದೆ. ಈ ಹೋರಾಟ ಟೆಸ್ಟ್ ಪಂದ್ಯದ ರೀತಿ, ಕ್ರಿಕೆಟ್ ಟೆಸ್ಟ್ ಮ್ಯಾಚ್ ಕೇವಲ ಐದು ದಿನ ಇರುತ್ತದೆ. ಆದರೆ ಕೊರೊನಾ ಬಹಳ ದಿನ ಇರುವಂತದ್ದು, ಕ್ರಿಕೆಟ್‍ನಲ್ಲಿ ಎರಡು ಇನ್ನಿಂಗ್ಸ್ ಇದ್ದರೆ, ಇದರಲ್ಲಿ ಜಾಸ್ತಿ ಇರುತ್ತದೆ. ಆದರೆ ನಾವು ಮೊದಲ ಇನ್ನಿಂಗ್ಸ್ ನಲ್ಲಿ ಲೀಡ್ ಪಡೆದಿದ್ದೇವೆ. ಆದರೆ ಎರಡನೇ ಇನ್ನಿಂಗ್ಸ್ ಸ್ವಲ್ಪ ಕಠಿಣವಾಗಿ ಇರುತ್ತದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನಾವು ಪಣತೊಡಬೇಕು. ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಾವು ಹೀಗಿದ್ದಾಗ ಕೊರೊನಾ ಸೋಂಕಿಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಕೊರೊನಾ ವಾರಿಯರ್ಸ್ ನಮಗಾಗಿ ಅವರ ಕುಟುಂಬವನ್ನು ತ್ಯಾಗ ಮಾಡಿ ಬಹಳ ರಿಸ್ಕ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದ ನಾವು ನಿಮ್ಮ ಜೊತೆ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡೋಣ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ಕೊರೊನಾ ವಾರಿಯರ್ಸ್ ಧನ್ಯವಾದ ತಿಳಿಸಿದ್ದ ಸಮಲತಾ, ಈ ವಿಡಿಯೋದಲ್ಲಿ ಅನಿಲ್ ಕುಂಬ್ಳೆ, ದರ್ಶನ್, ಯಶ್ ಮತ್ತು ಅಥ್ಲೆಟ್ ಅಶ್ವಿನಿ ನಾಚಪ್ಪ ಅವರನ್ನು ನಾಮಿನೇಟ್ ಮಾಡಿದ್ದರು. ಈಗ ಇದಕ್ಕೆ ಅನಿಲ್ ಕುಂಬ್ಳೆ ಅವರು ಉತ್ತರ ನೀಡಿದ್ದಾರೆ. ಇದಕ್ಕೆ ರೀಪ್ಲೇ ಕೊಟ್ಟಿರುವ ಸುಮಲತಾ ಅವರು ಥ್ಯಾಂಕ್ಯೂ ಅನಿಲ್ ಕುಂಬ್ಳೆ, ನೀವು ನಮ್ಮ ಕರ್ನಾಟಕದ ಹೆಮ್ಮೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *