ಭಟ್ಕಳದಿಂದ ಬಂದ ಬೋಟುಗಳನ್ನು ತಂಗಲು ಬಿಡದ ಗಂಗೊಳ್ಳಿ ಜನ

– ಗಂಗೊಳ್ಳಿ ಬಂದರಲ್ಲಿ ಮೀನುಗಾರರ ಜಟಾಪಟಿ

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಜಟಾಪಟಿ ನಡೆದಿದ್ದು, ಭಟ್ಕಳದಿಂದ ಬಂದ ದೋಣಿಗಳನ್ನು ವಾಪಾಸ್ ಕಳುಹಿಸಲಾಗಿದೆ.

ಪರ್ಷಿಯನ್ ಮಾದರಿಯ ಎಂಟು ದೋಣಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಗಂಗೊಳ್ಳಿಗೆ ಬಂದಿದ್ದವು. ಲಾಕ್‍ಡೌನ್ ಇರುವ ಸಂದರ್ಭದಲ್ಲಿ ಬೋಟ್ ಬಂದಿರೋದರಿಂದ ಗಂಗೊಳ್ಳಿ ಮತ್ತು ಭಟ್ಕಳದ ಮೀನುಗಾರರ ನಡುವೆ ವಾಗ್ವಾದ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಲವು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಉಡುಪಿಗೂ ಅದನ್ನು ಹರಿಸಬೇಡಿ ಎಂದು ಮೀನುಗಾರರು ತಗಾದೆ ತೆಗೆದಿದ್ದಾರೆ. ಪರ್ಶಿಯನ್ ದೋಣಿಗಳನ್ನು ಬಂದರಿನಲ್ಲಿ ಲಂಗರು ಹಾಕಲು ಇಲ್ಲಿನ ಮೀನುಗಾರರು ಅಡ್ಡಿಪಡಿಸಿದ್ದಾರೆ. ಪರ್ಶಿಯನ್ ಬೋಟ್ ನಲ್ಲಿ ಹೊರ ರಾಜ್ಯದ ಕಾರ್ಮಿಕರು ಇದ್ದರು ಎಂಬುದು ಜಗಳಕ್ಕೆ ಮೂಲ ಕಾರಣವಾಗಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಸ್ಥಳೀಯ ಮೀನುಗಾರಿಕಾ ಅಧಿಕಾರಿಗಳು ಬಂದರಿಗೆ ದೌಡಾಯಿಸಿದ್ದಾರೆ. ಲಾಕ್‍ಡೌನ್ ಸಂಪೂರ್ಣವಾಗಿ ತೆರವು ಆಗುವ ತನಕ, ಮೀನುಗಾರಿಕೆ ಆರಂಭವಾಗುವವರೆಗೆ ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಯ ದೋಣಿಗಳು ಎಲ್ಲೂ ಸಂಚರಿಸಬಾರದು ಎಂದು ಮೀನುಗಾರರು ಒತ್ತಾಯಿಸಿದರು.

ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಅಂಜನಾದೇವಿ ಮಾತನಾಡಿ, ಗಂಗೊಳ್ಳಿ ಬಂದರಿಗೆ ಭಟ್ಕಳದಿಂದ ಎಂಟು ದೋಣಿಗಳು ಬರುತ್ತಿವೆ ಎಂಬ ಮಾಹಿತಿ ಬಂತು. ತಕ್ಷಣ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದೆ. ಸುಮಾರು ಇಪ್ಪತ್ತು ಮಂದಿ ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಮೀನುಗಾರರು ಇರುವುದು ನಮಗೆ ಗೊತ್ತಾಗಿದೆ. ಅವರೆಲ್ಲರ ಮಾಹಿತಿಗಳನ್ನು ಕಲೆ ಹಾಕಿದ್ದೇವೆ. ದೋಣಿಗಳ ಸಮೇತ ಅವರನ್ನು ವಾಪಸ್ ಕಳುಹಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸುತ್ತೇನೆ ಎಂದರು.

Comments

Leave a Reply

Your email address will not be published. Required fields are marked *