ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಬಂದ ನಂತರ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೋಗಿದೆ. ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗುತ್ತಾ ಬರುತ್ತಿದೆ. ಆದರೆ ಲಾಕ್‍ಡೌನ್ ನಡುವೆಯೂ ಅವಳಿ ನಗರದ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ.

ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊರೊನಾ ಲಾಕ್‍ಡೌನ್ ಬರಸಿಡಿಲು ಬಡಿದಂತಾಗಿತ್ತು. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಮಾಡಿದ ಐಡಿಯಾ ವರ್ಕೌಟ್ ಆಗಿದೆ.

ಜನ ಕಚೇರಿಗೆ ಬಾರದೇ ಆನ್‍‍ಲೈನ್‍‍ನಲ್ಲಿ ತೆರಿಗೆ ಪಾವತಿಸುವಂತೆ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಪಾಲಿಕೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಜನತೆ ಆಸ್ತಿ ತೆರಿಗೆಯನ್ನ ಆನ್‍ಲೈನ್ ಮೂಲಕ ಪಾವತಿಸಿದ್ದಾರೆ. ಪರಿಣಾಮ ಮಹಾನಗರ ಪಾಲಿಕೆ ಲಾಕ್‍ಡೌನ್ ಸಂದರ್ಭದಲ್ಲೂ ಬರೋಬ್ಬರಿ 2 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು ಆಸ್ತಿ ತೆರಿಗೆ ಕಟ್ಟುವಂತೆ ಜನಜಾಗೃತಿ ಮೂಡಿಸಿದರು. ಮೇ ತಿಂಗಳೊಳಗೆ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಆಸ್ತಿ ತೆರಿಗೆ ದರ ಹೆಚ್ಚಿಸದೇ ಹಳೆ ದರದಲ್ಲೇ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ಪರಿಣಾಮ ಪಾಲಿಕೆಯ ಬೊಕ್ಕಸಕ್ಕೆ ಹಣ ಹರಿದುಬಂದಿದೆ ಎಂದು ಸ್ಥಳೀಯ ನಿವಾಸಿ ನಾಗರಾಜ್ ಹೇಳಿದರು.

ಲಾಕ್‍ಡೌನ್ ನಡುವೆ ಆಸ್ತಿ ತೆರಿಗೆ ಸಂಗ್ರಹ ಮಾಡುವುದು ಸವಾಲಿನ ಕೆಲಸವಾಗಿದೆ. ಆದರೆ ಈ ಸವಾಲನ್ನ ಸಾಮಾಜಿಕ ಜಾಲತಾಣಗಳ ಸದ್ಬಳಕೆಯಿಂದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೇ ಪಾಲಿಕೆ ಅಧಿಕಾರಿಗಳು ತೆರಿಗೆ ಸಂಗ್ರಹಣೆ ಮಾಡುವಲ್ಲಿ ಯಶ್ವಸಿಯಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

Comments

Leave a Reply

Your email address will not be published. Required fields are marked *