ಕೆರೆಗೆ ವಿಷ ಹಾಕಿದ ಕಿಡಿಗೇಡಿಗಳು – ಸಾವಿರಾರು ಮೀನುಗಳ ಮಾರಣಹೋಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಕಿಡಿಗೇಡಿಗಳು ಫಲ್ಗುಣಿ ನದಿಗೆ ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ.

ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದಿದೆ. ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ರೋಗ ಹರಡುವ ಭೀತಿ ಎದುರಾಗಿದೆ.

ಪ್ರಾಣಿ ಪಕ್ಷಿಗಳು ಈ ವಿಷ ನೀರನ್ನೇ ಕುಡಿಯುತ್ತಿದ್ದು, ಅವುಗಳು ಕೂಡ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿದೆ. ಈ ಕೆಲಸ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಒಂದು ವೇಳೆ ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.

ಸ್ಥಳೀಯ ಒಂದು ತಂಡದ ಮೇಲೆ ಸಂಶಯ ವ್ಯಕ್ತಪಡಿಸಿದ ಸ್ಥಳೀಯರು, ಆ ತಂಡವನ್ನು ಸರಿಯಾಗಿ ವಿಚಾರಿಸಿದರೆ ಸತ್ಯ ಹೊರಬರಬಹುದು ಎನ್ನುತ್ತಿದ್ದಾರೆ. ಅದೇ ರೀತಿ ಈ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಆಸಡ್ಡೆ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *