ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಓರ್ವ ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾದವರು. ಉಗ್ರರು ಭಾರತೀಯ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆ ನಡೆದಿದೆ. ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರದ ಚಂಜ್‍ಮುಲ್ಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಉಗ್ರರು ಗುಂಡಿ ದಾಳಿ ನಡೆಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅಲ್ಲಿನ ನಾಗರಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಐವರು ಭದ್ರತಾ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ.

ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಜನರನ್ನು ಒತ್ತೆಯಾಳು ಮಾಡಿಕೊಳ್ಳಲು ಉಗ್ರರು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು. ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ತಂಡವು ಚಂದಿಮುಲ್ಲಾ ಪ್ರದೇಶದಿಂದ ನಾಗರಿಕನನ್ನು ಯಶಸ್ವಿಯಾಗಿ ಹೊರಹಾಕಿತು. ಆದರೆ ಕಾರ್ಯಾಚರಣೆಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

ಆಶುತೋಷ್ ಶರ್ಮಾ ಅವರು 21 ರಾಷ್ಟ್ರೀಯ ರೈಫಲ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೀರೋ ಎಂದು ಗುರುತಿಸಿಕೊಂಡಿದ್ದರು. ಈ ಹಿಂದೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಶುತೋಷ್ ಶರ್ಮಾ ಅವರ ಕೂಡುಗೆ ಮಹತ್ವದ್ದಾಗಿತ್ತು.

Comments

Leave a Reply

Your email address will not be published. Required fields are marked *