ಮೇ 3ರ ನಂತರ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್

– ಆರ್ಥಿಕತೆಗಾಗಿ ಇಲಾಖೆ, ನಿಗಮಗಳ ವಿಲೀನ

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಭರ್ಜರಿ ಪ್ಲಾನ್ ರೂಪಿಸಿದೆ.

ಮೇ 3ರ ನಂತರ ಆರ್ಥಿಕ ಮಿತವ್ಯಯಕ್ಕಾಗಿ ಇಲಾಖೆಗಳಿಗೆ ಮೇಜರ್ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಲಾಖೆಗಳ ವಿಲೀನ, ಮತ್ತೆ ಕೆಲವು ಬರ್ಖಾಸ್ತು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸಂಪುಟ ಉಪಸಮಿತಿಯ ವರದಿಯನ್ನು ಸಿಎಂ ಬಿಎಸ್‍ವೈ ತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಬಿಎಸ್‍ವೈ ಮಾಸ್ಟರ್ ಪ್ಲಾನ್?
ಅನಗತ್ಯ ಹುದ್ದೆಗಳ ರದ್ದು, ಬಿಳಿ ಆನೆಗಳಂತೆ ಬೊಕ್ಕಸಕ್ಕೆ ಭಾರವಾಗಿದ್ದ ಹುದ್ದೆಗಳು ರದ್ದುಗೊಳಿಸುವುದು. ಪ್ರಮುಖ ಇಲಾಖೆಗಳ ಜೊತೆ ಕೆಲವು ಇಲಾಖೆಗಳ ವಿಲೀನಗೊಳಿಸುವುದು ಮುಖ್ಯ ಪ್ಲಾನ್‍ಗಳಾಗಿವೆ ಎನ್ನಲಾಗುತ್ತಿದೆ. ಇದರಿಂದ ವಾರ್ಷಿಕ 2ರಿಂದ 3 ಸಾವಿರ ಕೋಟಿ ರೂ. ಹೊರೆ ಕಡಿಮೆಯಾಗುತ್ತದೆ.

ಕೆಲವು ಇಲಾಖೆಯ ಅನಗತ್ಯ ನಿಗಮಗಳ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕ ಹುದ್ದೆ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಹುದ್ದೆಗಳಿಗೆ ತಗಲುತ್ತಿದ್ದ ಖರ್ಚು-ವೆಚ್ಚ ಕಡಿತಕ್ಕೆ ಸರ್ಕಾರದ ಲೆಕ್ಕಾಚಾರ ಹಾಕಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಸರ್ಕಾರದ ಲೆಕ್ಕಾಚಾರದಲ್ಲಿ ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಇಂಧನ ಇಲಾಖೆಗಳಲ್ಲಿ ಕೆಲವು ವಿಲೀನ, ಕೆಲವು ನಿಗಮಗಳು ರದ್ದು ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.

ಯಾವೆಲ್ಲಾ ಇಲಾಖೆಗಳು ವಿಲೀನ ಸಾಧ್ಯತೆ?
ತೋಟಗಾರಿಕೆ ಜೊತೆ ರೇಷ್ಮೆ ಇಲಾಖೆ, ಕೈಗಾರಿಕೆ ಜೊತೆ ಸಾರ್ವಜನಿಕ ಉದ್ಯಮ, ಗ್ರಾಮೀಣಾಭಿವೃದ್ಧಿಯಲ್ಲಿ ಕುಡಿಯುವ ನೀರಿನ ಯೋಜನೆ ನಿಗಮ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದಿಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜೊತೆಗೆ ಕಂದಾಯ ಇಲಾಖೆಯಲ್ಲಿ ಪ್ರಾಕೃತಿಕ ವಿಕೋಪ ಪ್ರತ್ಯೇಕ ನಿಗಮ, ಕೆಲವು ಇಲಾಖೆಗಳ ವಿಲೀನ, ಮತ್ತೆ ಕೆಲವು ಇಲಾಖೆಗಳ ನಿಗಮಗಳೇ ಬರ್ಖಾಸ್ತು, ಆಯುಕ್ತರು, ಕಾರ್ಯದರ್ಶಿಗಳು, ನಿರ್ದೇಶಕರು, ಪ್ರಾದೇಶಿಕ ಆಯುಕ್ತರು, ಹೆಚ್ಚುವರಿ ಆಯುಕ್ತರ ಹುದ್ದೆಯೆಂಬ ಬಿಳಿಆನೆಗೆ ಗೇಟ್ ಪಾಸ್ ನೀಡಲು ಬಿಎಸ್‍ವೈ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

Comments

Leave a Reply

Your email address will not be published. Required fields are marked *