ನೆಲಮಂಗಲ: ಕೊರೊನಾ ವೈರಸ್ ಲಾಕ್‍ಡೌನ್ ಸಮಯದ ತುರ್ತು ಪರಿಸ್ಥಿತಿಯಲ್ಲಿ ಡಾ.ಎಂ.ಲೀಲಾವತಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಬಡವರಿಗಾಗಿ ಇದ್ದ ಆಸ್ಪತ್ರೆಗೆ ವೈದ್ಯರು ಇಲ್ಲದೆ ಬೀಗ ಹಾಕಿದ್ದು ಜನರು ಆತಂಕದಲ್ಲಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕಳೆದ 10 ವರ್ಷದ ಹಿಂದೆ ಸ್ವತಃ ಹಿರಿಯ ನಟಿ ಡಾ.ಲೀಲಾವತಿಯವರು ಆಸ್ಪತ್ರೆ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಳ್ಳಿಗಾಡಿನ ನೂರಾರು ಜನರು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ವೈದ್ಯರು ಬರದೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ ಎನ್ನಲಾಗಿದ್ದು, ನೆಲಮಂಗಲ ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

ಇತ್ತ ಕೊರೊನಾ ವೈರಸ್ ಲಾಕ್‍ಡೌನ್ ವೇಳೆ ನಗರ ಹಾಗೂ ಪಟ್ಟಣದ ಆಸ್ಪತ್ರೆಗೆ ಬರದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಇಂದು ಈ ಆಸ್ಪತ್ರೆಯ ಮುಂದೆ ಜಮಾಯಿಸಿದ ನೂರಾರು ವೃದ್ಧರು ಅಧಿಕಾರಿಗಳ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಬೀಗ ನೋಡಿ ಆಘಾತಕ್ಕೆ ಒಳಗಾದ ಲೀಲಾವತಿ ಹಾಗೂ ವಿನೋದ್ ರಾಜ್, ಯಾಕೆ ನಮ್ಮ ಹಾಗೂ ನಮ್ಮ ಹಳ್ಳಿ ಜನರ ಮೇಲೆ ಈ ರೀತಿಯ ದ್ವೇಷ. ನಾಲ್ಕು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು, ಆಗ ನಿಮ್ಮ ಪಬ್ಲಿಕ್ ಟಿವಿಯ ವರದಿ ಬಳಿಕ ಆಗಿನ ಆರೋಗ್ಯ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಇದೆ ಸಮಸ್ಯೆ ಮತ್ತೆ ಮತ್ತೆ ಮರುಕಳಿಸಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನಟಿ ಲೀಲಾವತಿಯವರು ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply