ಗಂಭೀರ್ ನಾನು ಉತ್ತಮ ಸ್ನೇಹಿತರು, ಒಟ್ಟಿಗೆ ಊಟ ಮಾಡುತ್ತಿದ್ದೆವು- ಪಾಕ್ ಕ್ರಿಕೆಟಿಗ

ಇಸ್ಲಾಮಾಬಾದ್: ಭಾರತ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹಾಗೂ ನಾನು ಉತ್ತಮ ಸ್ನೇಹಿತರು. ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು ಎಂದು ಪಾಕಿಸ್ತಾನ ಅನುಭವಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ 2010ರಲ್ಲಿ ನಡೆದಿದ್ದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ವೇಳೆ ಪರಸ್ಪರ ಮುಖಾಮಖಿಯಾಗಿ ಅಕ್ಮಲ್, ಗಂಭೀರ್ ಜಗಳವಾಡಿದ್ದ ಘಟನೆ ಸಾಕಷ್ಟು ಮಂದಿಗೆ ನೆನಪಿರುತ್ತದೆ. ಅಂದು ಗಂಭೀರ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿದ್ದ ಅಕ್ಮಲ್ ಅನಗತ್ಯವಾಗಿ ಅಂಪೈರ್ ಗೆ ಮನವಿ ಮಾಡುತ್ತಿದ್ದರು. ಪರಿಣಾಮ ತಾಳ್ಮೆ ಕಳೆದುಕೊಂಡ ಗಂಭೀರ್ ಅಕ್ಮಲ್‍ಗೆ ಎಚ್ಚರಿಕೆ ನೀಡಿದ್ದರು. ಇದೇ ವೇಳೆ ಅಕ್ಮಲ್ ಕೂಡ ಕೋಪಗೊಂಡ ಹಿನ್ನೆಲೆಯಲ್ಲಿ ಆನ್‍ಫೀಲ್ಡ್ ನಲ್ಲೇ ಜಗಳ ವಾಡಿದ್ದರು. ಇದೇ ಪಂದ್ಯದಲ್ಲಿ ಡ್ರಿಂಕ್ಸ್ ವೇಳೆ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇತ್ತ ಮತ್ತೊಂದು ಬದಿಯಲ್ಲಿದ್ದ ನಾಯಕ ಧೋನಿ, ಗಂಭೀರ್ ಅವರಿಗೆ ಸಮಾಧಾನ ಹೇಳಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಗಮನರ್ಹವಾಗಿ ಎಲ್ಲರ ನೆನಪಿನಲ್ಲಿದೆ.

ಬಳಿಕ 2012-13ರ ಭಾರತ, ಪಾಕ್ ನಡುವೆ ಬೆಂಗಳೂರಿನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಇಶಾಂತ್ ಶರ್ಮಾ, ಕಮ್ರಾನ್ ಅಕ್ಮಲ್ ವಾಗ್ವಾದ ನಡೆಸಿದ್ದರು. ಈ ಎರಡು ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮ್ರಾನ್ ಅಕ್ಮಲ್, ಈ ಘಟನೆಗಳನ್ನು ಕ್ರೀಡಾಂಗಣದಲ್ಲೇ ಮರೆತು ಹೋಗಿದ್ದೇನೆ. ನನ್ನ ಹಾಗೂ ಗಂಭೀರ್, ಇಶಾಂತ್ ನಡುವೆ ಉತ್ತಮ ಸ್ನೇಹವಿದೆ. ಪಂದ್ಯದ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಜಗಳ ನಡೆದಿತ್ತು. ಗಂಭೀರ್ ನನಗೆ ಕ್ರೀಡಾಂಗಣದಲ್ಲಿ ಏನು ಹೇಳಿದರು ಎಂಬುವುದು ಅರ್ಥವಾಗದ ಕಾರಣ ಜಗಳ ನಡೆದಿತ್ತು. ಗಂಭೀರ್ ನಾನು ಉತ್ತಮ ಸ್ನೇಹಿತರಾದ ಕಾರಣ ಕ್ರಿಕೆಟ್ ಟೂರ್ನಿಗಳ ವೇಳೆ ಭೇಟಿ ಮಾಡಿ ಒಟ್ಟಿಗೆ ಊಟ ಮಾಡುತ್ತಿದ್ದೆವು. ಇಶಾಂತ್ ಜೊತೆಗಿನ ಘಟನೆಯೂ ಕೂಡ ಇಂತಹದ್ದೆ. ಇಂದಿಗೂ ನಾವು ಪರಸ್ಪರ ಗೌರವದಿಂದ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಕಮ್ರಾನ್ ಅಕ್ಮಲ್ ಪಾಕಿಸ್ತಾನದ ಪರ 53 ಟೆಸ್ಟ್, 157 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದು, ಇತ್ತೀಚೆಗೆ ಕಮ್ರಾನ್ ಅಕ್ಮಲ್ ಸಹೋದರ ಉಮರ್ ಅಕ್ಮಲ್ ವಿರುದ್ಧ ಪಿಸಿಬಿ ಮೂರು ವರ್ಷ ನಿಷೇಧ ವಿಧಿಸಿತ್ತು. ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಸಂಪರ್ಕ ನಡೆಸಿದ ವಿಚಾರವನ್ನು ಕ್ರಿಕೆಟ್ ಬೋರ್ಡಿಗೆ ತಿಳಿಸದ ಕಾರಣ ಪಿಸಿಬಿ ನಿಷೇಧ ವಿಧಿಸಿತ್ತು.

Comments

Leave a Reply

Your email address will not be published. Required fields are marked *