ಕ್ಯಾಬಿನೆಟ್ ಸಭೆಯಲ್ಲಿ ಎಣ್ಣೆ ಬಗ್ಗೆ ಬಿಸಿ ಬಿಸಿ ಚರ್ಚೆ

ಬೆಂಗಳೂರು: ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿರುವ ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೋ? ಬೇಡವೋ ಈ ವಿಚಾರದ ಬಗ್ಗೆ ಇಂದು ನಡೆದ ಕ್ಯಾಬೆನೆಟ್ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.

ಕೆಲ ಸಚಿವರು ಕ್ಷೇತ್ರದಲ್ಲಿ ಜನರ ಒತ್ತಡ ಹೆಚ್ಚಾಗಿದ್ದು, ವ್ಯಾಪಾರಿಗಳು ಒತ್ತಡ ತರುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಮದ್ಯ ಮಾರಾಟಕ್ಕೆ ಅನುಮತಿ ನೀಡೋಣ ಎಂದು ಸಲಹೆ ನೀಡಿದ್ದಾರೆ.

ಈ ಸಲಹೆಗೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲೇಬಾರದು. ಒಂದು ಕಡೆ ಅನುಮತಿ ನೀಡಿ ಮತ್ತೊಂದು ಕಡೆ ಅನುಮತಿ ನೀಡದೇ ಇದ್ದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಲಾಕ್‍ಡೌನ್ ಸಡಿಲಿಕೆ ಆಗುವವರೆಗೂ ಮದ್ಯ ಮಾರಾಟಕ್ಕೆ ಅನುಮತಿ ನೀಡಬಾರದು ಎಂದು ತಿಳಿಸಿದರು.

ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೋ? ಬೇಡವೋ ಎಂಬ ನಿರ್ಧಾರವನ್ನು ಮೇ 3ರ ನಂತರ ತೆಗೆದುಕೊಳ್ಳೋಣ ಎಂದ ಸಿಎಂ ಹೇಳಿ ಈ ಮದ್ಯದ ಚರ್ಚೆಗೆ ವಿರಾಮ ಹಾಕಿದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ವಿಧಾನಸೌಧದಲ್ಲಿ ಇಂದು ಕಂದಾಯ ಸಚಿವ ಅಶೋಕ್ ಮಾತನಾಡುತ್ತಿದ್ದರು. ಈ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಾ ಎಂಬ ಪ್ರಶ್ನೆಗೆ, ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗೋದು. ಈಗ ಏನಾದ್ರೂ ನಾವು ಎಣ್ಣೆ ಬಿಟ್ಟರೆ ಕೊಟ್ಟಿರೋ ರೇಷನ್ ಎಲ್ಲಾ ಹೋಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಸದ್ಯ ಎಣ್ಣೆ ವಿಚಾರ ಬೇಡವೇ ಬೇಡ ಎಂದು ಉತ್ತರಿಸಿದರು.

Comments

Leave a Reply

Your email address will not be published. Required fields are marked *