ರಾಬರ್ಟ್ ಚಿತ್ರ ತಂಡದಿಂದ ಸರ್ಪ್ರೈಸ್- ಕ್ಯಾಮೆರಾ ಹಿಂದಿನ ಸೈನಿಕರಿಗೆ ನಮನ

ಬೆಂಗಳೂರು: ಕಾರ್ಮಿಕ ದಿನಾಚರಣೆ ಮೂಲಕ ಶ್ರಮಿಕ ವರ್ಗಕ್ಕೆ ಗೌರವ ಸಲ್ಲಿಸಲಾಗುತ್ತದೆ. ವಿವಿಧ ಸಂಸ್ಥೆಗಳು ರಜೆ ನೀಡುತ್ತವೆ. ಅದೇ ರೀತಿ ರಾಬರ್ಟ್ ಚಿತ್ರ ತಂಡ ಶ್ರಮಿಕ ವರ್ಗಕ್ಕೆ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ಆಗಾಗ ಸರ್ಪ್ರೈಸ್ ನೀಡುತ್ತಲೇ ಇದ್ದು, ಈಗಾಗಲೇ ಚಿತ್ರದ ಟೀಸರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದೆ. ಆದರೆ ಈ ಬಾರಿ ಅಭಿಮಾನಿಗಳ ಜೊತೆಗೆ ಶ್ರಮಿಕ ವರ್ಗವನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಒಂದು ಚಿತ್ರ ತಯಾರಾಗಬೇಕಾದರೆ ತೆರೆಯ ಹಿಂದಿನ ಹೀರೋಗಳು ಸಾಕಷ್ಟು ಶ್ರಮಿಸಬೇಕಾಗುತ್ತದೆ. ಇದರಲ್ಲಿ ಲೈಟ್ ಬಾಯ್ಸ್ ಸೇರಿದಂತೆ ಇತರೆ ದಿನಗೂಲಿ ನೌಕರರ ಪಾತ್ರ ಮಹತ್ವದ್ದು.

ಇದನ್ನರಿತ ಚಿತ್ರ ತಂಡ ಮೇ 1 ಅಂದರೆ ಇದೇ ಶುಕ್ರವಾರ ಕಾರ್ಮಿಕರಿಗಾಗಿಯೇ ಸಿದ್ಧಪಡಿಸಿದ ಗೀತೆಯೊಂದನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಕಾರ್ಮಿಕರಿಗೆ ಗೀತ ನಮನ ಸಲ್ಲಿಸುತ್ತಿದೆ. ಈಗಾಗಲೇ ಮೂರು ಹಾಡುಗಳೊಂದಿಗೆ ಅಭಿಮಾನಿಗಳು ಹಾಗೂ ಚಿತ್ರ ರಸಿಕರನ್ನು ರಂಜಿಸಿರುವ ಚಿತ್ರ ತಂಡ ಇದೀಗ ಕಾರ್ಮಿಕರನ್ನು ನೆನೆಯುತ್ತಿದೆ.

ಈ ಕುರಿತು ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಪರದೆಯಲ್ಲಿ ಮ್ಯಾಜಿಕ್ ನಡೆಯಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದುಡಿದಿರುವ ಆಫ್‍ಸ್ಕ್ರೀನ್ ವಾರಿಯರ್ಸ್ ಕುರಿತು ರಾಬರ್ಟ್ ಚಿತ್ರ ತಂಡ ವಿಡಿಯೋ ಸಿದ್ಧಪಡಿಸಿದೆ. ಡಿ ಬಾಸ್ ಹಾಗೂ ರಾಬರ್ಟ್ ಕುರಿತ ಮೇಕಿಂಗ್ ವಿಡಿಯೋವನ್ನು ಕಾರ್ಮಿಕರ ದಿನ ಮೇ 1ರಂದು ಬೆಳಗ್ಗೆ 10.05ಕ್ಕೆ ಉಮಾಪತಿ ಫಿಲಂಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಬರ್ಟ್ ಚಿತ್ರ ಇಷ್ಟೊತ್ತಿಗಾಗಲೇ ತೆರೆಕಂಡು ಘರ್ಜನೆ ಮುಂದುವರಿಸಬೇಕಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಸಿನಿಮಾ ವಲಯದ ಎಲ್ಲ ಕೆಲಸಗಳು ಸ್ಥಗಿತವಾಗಿವೆ. ಹೀಗಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ಹಾಗೂ ಪರಿಸ್ಥಿತಿ ತಿಳಿಯಾದ ನಂತರ ಚಿತ್ರ ಬಿಡುಗಡೆಯಾಗುತ್ತದೆ ಎಂದು ಸ್ವತಃ ದಾಸ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏ.4ರಂದು ಚಿತ್ರ ತೆರೆಗೆ ಬರಬೇಕಿತ್ತು.

ಡಿ ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಆಶಾ ಭಟ್, ಜಗಪತಿ ಬಾಬು, ರವಿಶಂಕರ್, ಪ್ರಮುಖ ಮಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

Comments

Leave a Reply

Your email address will not be published. Required fields are marked *