ಸುಳ್ಯದ ಕನಕಮಜಲು ಗ್ರಾಮ ಪಂಚಾಯತಿಗೆ ರಾಷ್ಟ್ರೀಯ ಪುರಸ್ಕಾರ

– ನಾನಾಜಿ ದೇಶ್ ಮುಖ್ ರಾಷ್ಟ್ರೀಯ ಗೌರವ್ ಗ್ರಾಮಸಭಾ ಪುರಸ್ಕಾರ್ ಗೌರವ
– ಈ ಪುರಸ್ಕಾರಕ್ಕೆ ಭಾಜನವಾದ ರಾಜ್ಯದ ಏಕೈಕ ಪಂಚಾಯತ್

ಮಂಗಳೂರು: ಪಂಚಾಯತ್ ಪುರಸ್ಕಾರ್ 2020ರ ಸಾಲಿನ ಪ್ರಗತಿ ಆಧರಿಸಿ ಕೇಂದ್ರ ಪುರಸ್ಕೃತ ದೀನದಯಾಳ್ ಪಂಚಾಯತ್ ಸಶಕ್ತೀಕರಣ ಪ್ರಶಸ್ತಿಯಾದ “ನಾನಾಜಿ ದೇಶ್‍ಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ 2020” ಕ್ಕೆ ಕರ್ನಾಟಕದಲ್ಲೇ ಏಕೈಕ ಗ್ರಾಮ ಪಂಚಾಯತ್ ಆಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

ರಾಷ್ಟ್ರಮಟ್ಟದ ಕ್ಷೇತ್ರಗಳ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಎಸ್.ಎಂ. ಜುಲ್ಫಿಕರ್ ಉಲ್ಲಾ, ಬೋಧಕರಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಆರ್. ಶಂಕರ್ ಅವರುಗಳನ್ನು ಒಳಗೊಂಡ ನಿರ್ದೇಶಕರುಗಳ ತಂಡವು ವಿವಿಧ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ನಡುವೆ ಕಳೆದ ಫೆಬ್ರವರಿ 13ರಂದು ಕನಕಮಜಲು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದೀಗ ಅಂತಿಮವಾಗಿ ಗುರುತಿಸಲ್ಪಟ್ಟ ಕರ್ನಾಟಕ ರಾಜ್ಯದ ಮೂರು ಗ್ರಾಮ ಪಂಚಾಯತ್ ಗಳ ಪೈಕಿ ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳಲ್ಲಿ, ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಕನಕಮಜಲು ಗ್ರಾ.ಪಂ.ಗೆ ಈಗಾಗಲೇ ಗಾಂಧಿ ಗ್ರಾಮ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ, ಸ್ವಚ್ಛತಾ ಪುರಸ್ಕಾರಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ದೇಶದಾದ್ಯಂತ ಗ್ರಾಮ ಸಭೆಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ಒಟ್ಟು 20 ಗ್ರಾ.ಪಂ.ಗಳಿಗೆ ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರಗಳನ್ನು ನೀಡಲಾಗುತ್ತಿದೆ. ಸದರಿ ಈ ಪ್ರಶಸ್ತಿಯು 10 ಲಕ್ಷ ರೂ. ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

Comments

Leave a Reply

Your email address will not be published. Required fields are marked *