– ಹೆಬ್ಬಾಳ ಬಳಿ ಭೀಕರ ಅಪಘಾತ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮುಂಜಾನೆಯಿಂದಲೇ ಸುರಿದ ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ತಗ್ಗುಪ್ರದೇಶಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಬೆಳಗ್ಗೆ 5 ಗಂಟೆಯಿಂದ ಆರಂಭವಾದ ಮಳೆ 8 ಗಂಟೆಯವರೆಗೆ ಸುರಿದಿತ್ತು. ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಇದ್ದ ಕಾರಣ ಭಾರೀ ಅನಾಹುತವಾಗಿದೆ. ಯಲಹಂಕ- ದೊಡ್ಡಬಳ್ಳಾಪುರ ಹೆದ್ದಾರಿ ಕೂಡ ಮಳೆ ನೀರಿಗೆ ಜಲಾವೃತವಾಗಿದೆ. ಮಳೆ ನೀರಿನಿಂದ ರಸ್ತೆ ಕೆರೆಯಂತಾಗಿದೆ. ಬೊಮ್ಮನಹಳ್ಳಿ ಮನೆಗಳಿಗೆ ನೀರು ನುಗಿದ್ದು, ನಿವಾಸಿ ನೀರು ಹೊರಹಾಕುವಲ್ಲಿ ನಿರತರಾಗಿದ್ದಾರೆ.

ಶಾಂತಿನಗರ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ನೀರು ತುಂಬಿಕೊಂಡು ಬ್ಲಾಕ್ ಆಗಿವೆ.
ಬೊಮ್ಮನಹಳ್ಳಿ 9 ನೇ ಬ್ಲಾಕ್, ಎರಡನೇ ಕ್ರಾಸ್, ಬಗಲಗುಂಟೆ, ಬನಶಂಕರಿಯಲ್ಲಿ ರಸ್ತೆಗಳು ಬ್ಲಾಕ್ ಆಗಿವೆ. ಅಲ್ಲದೇ ಮೂರು ಕಡೆ ಮರ ಬಿದ್ದಿದೆ. ಬಸವೇಶ್ವರ ನಗರ, ಕೋರಮಂಗಲ ಮತ್ತು ಶೇಷಾದ್ರಿ ಲೇಔಟ್ ನಲ್ಲಿ ಮರಗಳು ಧರೆಗುರುಳಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ ದೂರು ನೀಡಿದ್ದಾರೆ.

ಸುಂಕದಕಟ್ಟೆ ಬಳಿ ರಾಜಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಸುಂಕದಕಟ್ಟೆಯಲ್ಲಿ ರಸ್ತೆಯ ಅಂಚು ಕುಸಿದಿವೆ. ಯಲಹಂಕ ಆವಲಹಳ್ಳಿ ರಸ್ತೆ ನೀರಿನಿಂದ ಜಲಾವೃತವಾಗಿದೆ. ಯಲಹಂಕ – ದೊಡ್ಡಬಳ್ಳಾಪುರ ಹೆದ್ದಾರಿ ಕೆರೆಯಂತಾಗಿದೆ. ಕೋರಮಂಗಲ ಪಾಸ್ ಪೋರ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ಆಟೋ ಹಾಗೂ ದ್ವಿಚಕ್ರ ವಾಹನ ಮುಳುಗಿದೆ. ಆಟೋ ಹಾಗೂ ದ್ವಿಚಕ್ರ ವಾಹನಗಳನ್ನು ಹೊರ ತರಲು ವಾಹನ ಸವಾರರು ಪರದಾಡುತ್ತಿದ್ದಾರೆ.

ಒಟ್ಟಿನಲ್ಲಿ ಮೊಳಕಾಲುದ್ದ ನೀರಿನಲ್ಲಿ ರಸ್ತೆ ದಾಟಲು ಸಾರ್ವಜನಿಕರ ಪರದಾಟ ಅನುಭವಿಸಿದ್ದಾರೆ. ಸೈಕಲ್ ಸವಾರರಿಗೂ ಮಳೆರಾಯ ಕಾಟ ಕೊಟ್ಟಿದೆ.
ಹೆಬ್ಬಾಳ ಬಳಿ ಅಪಘಾತ:
ಭಾರೀ ಮಳೆಗೆ ಹೆಬ್ಬಾಳದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಕ್ಯಾಂಟರ್, ಲಾರಿ ಹಾಗೂ ಪೊಲೀಸ್ ವ್ಯಾನ್ ನಡುವೆ ಆಕ್ಸಿಡೆಂಟ್ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಕ್ಯಾಂಟರ್, ಡಿವೈಡರ್ ಹತ್ತಿ ಮರಕ್ಕೆ ಡಿಕ್ಕಿ ಹೊಡೆದಿದೆ.

Leave a Reply