ಪ್ಲಾಸ್ಮಾ ನೀಡಿ ಜೀವ ಉಳಿಸಲು ಮುಂದಾದ ಗಾಯಕಿ

ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊರೊನಾ ಸೋಂಕು ತಗುಲಿದ ನಂತರ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳದೆ, ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ಜನರೇ ಕೊಂಡಾಡುವ ಕೆಲಸ ಮಾಡುತ್ತಿದ್ದು, ಜೀವ ಉಳಿಸುವ ನಿರ್ಧಾರ ಕೈಗೊಂಡಿದ್ದಾರೆ.

ಹೌದು, ರಾಜಕಾರಣಿಗಳೂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕನಿಕಾ ಕಪೂರ್ ವಿಪರೀತ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ನಂತರ ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ನೆಟ್ಟಿಗರು ಇದನ್ನು ಒಪ್ಪಿರಲಿಲ್ಲ. ಇದೀಗ ಎಲ್ಲರೂ ತಿರುಗಿ ನೋಡುವಂತೆ ಅವರು ಮಾಡಿದ್ದು, ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಕೊರೊನಾ ಸೋಂಕಿತ ವ್ಯಕ್ತಿ ಬಹುಬೇಗ ಗುಣಮುಖರಾಗಲು ಅತ್ಯುತ್ತಮ ಮಾರ್ಗ ಪ್ಲಾಸ್ಮಾ ಥೆರಪಿ ಮಾಡುವುದು. ಇದರಿಂದಾಗಿ ಕೊರೊನಾ ಸೋಂಕಿತ ವ್ಯಕ್ತಿ ಬೇಗನೇ ಗುಣಮುಖರಾಗುತ್ತಾರೆ ಎಂಬುದು ಈಗಾಗಲೇ ದೆಹಲಿಯಲ್ಲಿ ನಡೆದ ಪರೀಕ್ಷೆಯಲ್ಲಿ ಬಹುತೇಕ ಸಾಬೀತಾಗಿದೆ. ಹೀಗಾಗಿ ಇತರ ರಾಜ್ಯಗಳೂ ಈ ನಿಯಮ ಪಾಲಿಸುತ್ತಿದ್ದು, ಪ್ಲಾಸ್ಮಾ ಥೆರಪಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಕೊರೊನಾ ಸೋಂಕಿತ ರೋಗಿಯನ್ನು ಬೇಗ ಗುಣಪಡಿಸಲು ಪ್ಲಾಸ್ಮಾ ಥೆರಪಿ ಅಗತ್ಯ ಎಂದಿದ್ದಾರೆ. ಅಲ್ಲದೆ ಕೊರೊನಾದಿಂದ ಗುಣಮುಖರಾದ ಎಲ್ಲರೂ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರ ಸೋಂಕಿತರು ಗುಣಮುಖರಾಗಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆ ನಡುವೆ ಗಾಯಕಿ ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದು, ಅಗತ್ಯವಿರುವವರಿಗೆ ಪ್ಲಾಸ್ಮಾ ನೀಡಲು ಸಿದ್ಧ. ಕೊರೊನಾದಿಂದ ಗುಣಮುಖರಾಗಿರುವ ಮೂವರು ಈಗಾಗಲೇ ಪ್ಲಾಸ್ಮಾ ದಾನ ನೀಡಿದ್ದು, ಹೀಗಾಗಿ ನಾನೂ ಪ್ಲಾಸ್ಮಾ ನೀಡಲು ನಿರ್ಧಾರ ಮಾಡಿದ್ದೇನೆ. ಈಗಾಗಲೇ ರಕ್ತ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಎಲ್ಲವೂ ಸರಿಯಾಗಿದ್ದರೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.

ಕನಿನಾ ಕಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಾರ್ಚ್ 20ರಂದು ದೃಢಪಟ್ಟಿತ್ತು. ಇದಾದ ಬಳಿಕ ಕೊರೊನಾ ವೈರಸ್ ಕುರಿತು ಕನಿಕಾ ನಿರ್ಲಕ್ಷ್ಯ ವಹಿಸಿದ್ದಾರೆ. ಇಂಗ್ಲೆಂಡ್‍ನಿಂದ ಮರಳಿದ ಮೇಲೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಗಾಯಕಿ ಸ್ಪಷ್ಟನೆ ನೀಡಿದ್ದರು.

Comments

Leave a Reply

Your email address will not be published. Required fields are marked *