ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದು ಬಸ್ಕಿ ಹೊಡೆದ ಉದ್ಯಮಿ ಪುತ್ರ

ಇಂದೋರ್: ಲಾಕ್‍ಡೌನ್ ಇದ್ದರೂ ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದ ಉದ್ಯಮಿ ಮಗನಿಗೆ ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

ಕೊರೊನಾ ಹೆಚ್ಚಾಗದಿರಲಿ ಎಂದು ಕೇಂದ್ರ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಆದರೆ ಕೆಲ ಕಡೆ ನಕಲಿ ಪಾಸ್ ಪಡೆದು ಅನಾವಶ್ಯಕವಾಗಿ ಮನೆಯಿಂದ ಹೊರಬರುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಕೆಲ ಶ್ರೀಮಂತರ ಮಕ್ಕಳು ಲಾಕ್‍ಡೌನ್ ನಡುವೆಯೂ ಜಾಲಿರೈಡ್ ಮಾಡುತ್ತಿದ್ದಾರೆ.

ಹಾಗೆಯೇ ಇಂದೋರ್ ನಗರದಲ್ಲಿ ಜಾಲಿರೈಡ್ ಮಾಡುತ್ತಿದ್ದ ಉದ್ಯಮಿ ದೀಪಕ್ ದರ್ಯಾನಿ ಅವರ ಮಗನನ್ನು ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ದರ್ಯಾನಿ ಅವರ 20 ವರ್ಷದ ಪುತ್ರ ಹಳದಿ ಬಣ್ಣದ ಓಪನ್ ಪೋರ್ಷೆ ಕಾರಿನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದ. ಇದನ್ನು ಕಂಡ ಅಧಿಕಾರಿಗಳು ಆತನನ್ನು ಅಡ್ಡಗಟ್ಟಿದ್ದಾರೆ. ನಂತರ ಕಿವಿಯನ್ನು ಕೈಯಲ್ಲಿ ಹಿಡಿದು ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ.

ಅಧಿಕಾರಿ ಹೇಳಿದಂತೆ ಬಸ್ಕಿ ಹೊಡೆಯುತ್ತಿರುವ ದರ್ಯಾನಿ ಮಗನನ್ನು ಸ್ಥಳದಲ್ಲಿ ಇದ್ದವು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇದನ್ನು ಒಪ್ಪಿಕೊಳ್ಳದ ದರ್ಯಾನಿ ಕುಟುಂಬ ನಮ್ಮ ಮಗನ ಬಳಿ ಕಾರಿನ ದಾಖಲೆಯಿತ್ತು. ಜೊತೆಗೆ ಅವನ ಬಳಿ ಲಾಕ್‍ಡೌನ್ ನಡುವೆಯೂ ಹೊರಗೆ ಹೋಗಲು ಪಾಸ್ ಕೂಡ ಇತ್ತು. ಆದರೂ ಪೊಲೀಸರು ಕರ್ತವ್ಯದ ನೆಪದಲ್ಲಿ ದರ್ಪ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ದೀಪಕ್ ದರ್ಯಾನಿ ಅವರು ಇಂದೋರ್ ನಲ್ಲಿ ಇರುವ ಆಶಾ ಮಿಠಾಯಿ ಕಂಪನಿಯ ಮಾಲೀಕರಾಗಿದ್ದಾರೆ. ಆದರೆ ಮಗನ ತಪ್ಪನ್ನು ಒಪ್ಪಿಕೊಳ್ಳದ ದೀಪಕ್ ದರ್ಯಾನಿ ನನ್ನ ಮಗನ ಬಳಿ ಸೂಕ್ತ ದಾಖಲೆಗಳು ಇದ್ದರೂ ಅಲ್ಲಿ ಅಧಿಕಾರಿಗಳು ಅವನ ಜೊತೆ ತಪ್ಪಾಗಿ ನಡೆದುಕೊಂಡಿದ್ದಾರೆ. ಆ ಕಾರಣದಿಂದ ಅವರ ಅಧಿಕಾರಿಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *