ಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ನೀಡಲು ಚೀನಾದ ನುರಿತ ವೈದ್ಯರ ತಂಡ ಉತ್ತರ ಕೊರಿಯಾಗೆ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ವೈದ್ಯರ ನಿಯೋಗವು ಬೀಜಿಂಗ್‍ನಿಂದ ಪ್ಯೊಂಗ್ಯಾಂಗ್‍ಗೆ ಗುರುವಾರ ಹೋಗಿದೆ ಎನ್ನಲಾಗಿದೆ. ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಅವರ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ.

ಈ ಮುಂಚೆಯಿಂದಲೂ ಚೀನಾ ಮತ್ತು ಉತ್ತರ ಕೊರಿಯಾದ ಸಂಬಂಧ ಉತ್ತಮವಾಗಿದೆ. ಕಳೆದ ಕೆಲ ವರ್ಷಗಳಿಂದ ಚೀನಾದ ರಹಸ್ಯ ಅಧಿಕಾರಿಗಳು ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸೇರಿ ಹಲವಾರು ಬಾರಿ ಕಿಮ್ ಜಾಂಗ್-ಉನ್ ಅನ್ನು ಭೇಟಿಯಾಗಿ ಬಂದಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಕಿಮ್ ಜಾಂಗ್-ಉನ್ ಆರೋಗ್ಯ ಹದೆಗೆಟ್ಟ ಸಮಯದಲ್ಲಿ ಚೀನಾ ವೈದ್ಯರನ್ನು ಕಳುಹಿಸಿಕೊಟ್ಟಿದೆ. ಆದರೆ ಈ ಬಗ್ಗೆ ಚೀನಾ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಕಿಮ್ ಜಾಂಗ್-ಉನ್ ಸರ್ವಾಧಿಕಾರಿಯಾಗಿದ್ದು, ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದರು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಕೊರಿಯಾ ತಮ್ಮ ದೇಶದ ನಾಯಕರ ಆರೋಗ್ಯದ ವಿಚಾರವನ್ನು ರಾಷ್ಟ್ರದ ಭದ್ರತೆಯ ವಿಚಾರವೆಂದು ಪರಿಗಣಿಸುತ್ತದೆ. ಈ ಕಾರಣಕ್ಕೆ ಕಿಮ್ ಆರೋಗ್ಯ ಬಗ್ಗೆ ಎಲ್ಲಿಯೂ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಎಲ್ಲದರ ಮಧ್ಯೆ ಸರ್ಕಾರಿ ಸ್ವಾಮ್ಯದ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆಯೊಂದು ಕಿಮ್ ಕಳೆದ ಬುಧವಾರ ಸಿರಿಯಾ ದೇಶದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ ಎಂದು ಸುದ್ದಿ ಮಾಡಿದೆ.

ಈ ಹಿಂದೆ ಅಮೆರಿಕ ಮೂಲದ ಸುದ್ದಿ ಸಂಸ್ಥೆಯೊಂದು ಕಿಮ್ ಹೃದಯರಕ್ತನಾಳದ ಸರ್ಜರಿಗೆ ಒಳಗಾಗಿದ್ದರು ಎಂದು ಸುದ್ದಿ ಮಾಡಿತ್ತು. ಜೊತೆಗೆ ನಮಗೆ ಬಂದ ಗುಪ್ತ ಮಾಹಿತಿ ಪ್ರಕಾರ ಈ ಸರ್ಜರಿಯ ನಂತರ ಕಿಮ್ ಆರೋಗ್ಯ ಪರಿಸ್ಥಿತಿ ತುಂಬ ಹದಗೆಟ್ಟಿದೆ ಎಂದು ವರದಿ ಮಾಡಿತ್ತು. ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದ ಚೀನಾ ರಾಯಭಾರಿ ಕಚೇರಿ ವಕ್ತಾರ, ನಮಗೆ ಕಿಮ್ ಆರೋಗ್ಯದ ಬಗ್ಗೆ ಮಾಹಿತಿ ಇದೆ. ಆದರೆ ಈ ಸಮಯದಲ್ಲಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply