ಕೊರೊನಾ ಟೆಸ್ಟ್ ನಡೆಸದಂತೆ ಕಿರಿಕ್ – ಜೆಡಿಎಸ್ ಎಂಎಲ್‍ಸಿ, ಪುತ್ರನ ವಿರುದ್ಧ ಎಫ್‍ಐಆರ್

ಮಂಡ್ಯ: ಕೋವಿಡ್-19 ಟೆಸ್ಟ್ ನಡೆಸದಂತೆ ಕಿರಿಕ್ ಮಾಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ಅಕ್ರಮ ಗುಂಪು), 147 (ದೊಂಬಿ) 341 (ಅಕ್ರಮವಾಗಿ ತಡೆಯುವುದು), ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಪ್ರಕರಣ ದಾಖಲಾಗಿದೆ. ಶ್ರೀಕಂಠೇಗೌಡ ಎ2, ಪುತ್ರ ಕೃಷಿಕ್ ಗೌಡ ಎ3, ಬೆಂಬಲಿಗರಾದ ಚಂದ್ರಕಲಾ ಎ4, ಜಗದೀಶ್ ಐದನೇ ಆರೋಪಿ ಆಗಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ 19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದರು. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದರು.

ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಟಿಎಸ್ ನಡೆದುಕೊಂಡ ರೀತಿ ಕಾನೂನು ಬಾಹಿರ ಹಾಗೂ ಅಕ್ಷಮ್ಯ ಅಪರಾಧವಾಗಿದೆ. ಈ ಸಂಬಂಧ ದೂರು ಪರಿಶೀಲಿಸಿ ಎಫ್‍ಐಆರ್ ದಾಖಲಿಸಲು ನಿರ್ಧಾರ ಮಾಡುವುದಾಗಿ ತಿಳಿಸಿದ್ದರು.

Comments

Leave a Reply

Your email address will not be published. Required fields are marked *