ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ದೃಢ: ಅಶ್ವತ್ಥನಾರಾಯಣ

– ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಸಲ್ಲದು
– ಡಿಕೆಶಿಗೆ ಡಿಸಿಎಂ ಟಾಂಗ್

ಬೆಂಗಳೂರು: ರಾಮನಗರ ಜೈಲಿನಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಉಪಮುಖ್ಯಮಂತ್ರಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಬಳಿಕ ಮಾತನಾಡಿದ ಅವರು, ರಾಮನಗರದಲ್ಲಿರುವ ಖೈದಿಗಳನ್ನು ವರ್ಗಾಯಿಸುವ ವೇಳೆ ವಿರೋಧ ಇತ್ತು. ಪರಪ್ಪನ ಅಗ್ರಹಾರ ದೊಡ್ಡ ಜೈಲು, ರಾಮನಗರ ಚಿಕ್ಕ ಜೈಲು. ಹಾಗಾಗಿ ಪಾದರಾಯನಪುರದ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇಡಲಾಯ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ರಾಮನಗರ ಜೈಲಿನ 19 ಮಂದಿ ಖೈದಿಗಳನ್ನು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತೇವೆ. ಪಾಸಿಟಿವ್ ಬಂದಿರುವ 5 ಮಂದಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಾವು ಮುನ್ನೆಚ್ಚಿರಕ ಕ್ರಮಗಳನ್ನು ಕೈಗೊಂಡೇ ಆರೋಪಿಗಳನ್ನು ರಾಮನಗರ ಜೈಲಿನಲ್ಲಿ ಇರಿಸಿದ್ದೆವು. ಇಂತಹ ಪರಿಸ್ಥಿತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿಬೇಕೇ ಹೊರತು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಯಾವುದೇ ಕಾರಣಕ್ಕೂ ಜನರನ್ನು ಪ್ರಚೋದನೆ ಮಾಡಬಾರದು. ಈವರೆಗೂ ಸಹಕಾರ ಕೊಟ್ಟಿದ್ದಾರೆ. ಅವರು ಒಂದು ಪಕ್ಷದ ರಾಜ್ಯಾಧ್ಯಕ್ಷರು, ಪ್ರಚೋದನೆ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟರು.

121 ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ್ದು, ಅದರಲ್ಲಿ ಇಬ್ಬರು ಆರೋಪಿಗಳಿಗೆ ಸೋಂಕಿನ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಗುರುವಾರ ತಡರಾತ್ರಿಯೇ ಇಬ್ಬರು ಸೋಂಕಿತ ಆರೋಪಿಗಳನ್ನು ಆರೋಗ್ಯ ಸಿಬ್ಬಂದಿ ಶಿಫ್ಟ್ ಮಾಡಿದ್ದರು. ಜೈಲಿನಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೋಂಕಿತರ ಶಿಫ್ಟ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಜಿಲ್ಲಾಡಳಿತ ಜೈಲಿನ ಸುತ್ತಮುತ್ತ ಸೀಲ್‍ಡೌನ್ ಮಾಡಿದ್ದಾರೆ. ಈ ಬೆನ್ನಲ್ಲೇ ಐವರಿಗೆ ಸೋಂಕು ತಗುಲಿರುವುದನ್ನು ಅಶ್ವತ್ಥನಾರಾಯಣ ಅವರು ದೃಢಪಡಿಸಿದ್ದಾರೆ.

ರಾಮನಗರ ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇತ್ತ ಬೆಂಗಳೂರು ಪೊಲೀಸರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಾದರಾಯನಪುರ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳನ್ನು ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ. ಮೂರು ರಾತ್ರಿ- ಹಗಲು ಕಾರ್ಯಚರಣೆ ನಡೆಸಿ ಸುಮಾರು 135 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಎಲ್ಲಾ ಆರೋಪಿಗಳನ್ನು ರಾಮನಗರ ಜೈಲಿಗೆ ಬಿಟ್ಟು ಬಂದಿದ್ದರು. ಸದ್ಯ ರಾಮನಗರ ಜೈಲಿನಲ್ಲಿರುವ ಇಬ್ಬರು ಆರೋಪಿಗಳಿಗೆ ಪಾಸಿಟಿವ್ ಬಂದಿದ್ದು, ಇದೀಗ ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ಇರೋ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ಬೆಂಗಳೂರಿಗೆ ವಾಪಸ್ ಕರೆ ತರೋ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *