ವಿಡಿಯೋ ಕಾಲ್‍ನಲ್ಲಿ ಮಗುವನ್ನ ನೋಡಿ ಕಣ್ಣೀರಿಟ್ಟ ಕೊರೊನಾ ಸೋಂಕಿತ ತಾಯಿ

– ಆಸ್ಪತ್ರೆ ಸಿಬ್ಬಂದಿಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ

ಮುಂಬೈ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಹಾಯಕರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗಳು ಪಿಪಿಇ ವೆಂಟಿಲೇಟರ್, ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸವಾಲಿನ ಸನ್ನಿವೇಶದಲ್ಲಿ ಪ್ರತಿ ಗಂಟೆಗೆ ಕೊರೊನಾ ರೋಗಿಗಳು ಒಂದಿಲ್ಲೊಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ವೈದ್ಯರು ತಾಳ್ಮೆ ಹಾಗೂ ಮಾನವೀಯತೆಯಿಂದ ರೋಗಿಗಳೊಂದಿಗೆ ನಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ವೈದ್ಯರು ಕೊರೊನಾ ಸೋಂಕಿತ ತಾಯಿ ಹಾಗೂ ಮಗುವನ್ನು ವಿಡಿಯೋ ಕಾಲ್ ಮೂಲಕ ಸೇರಿಸುವ ಕೆಲಸವನ್ನು ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವೈದ್ಯರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘4 ವಾರ ಕೆಲಸ ನಿರ್ವಹಿಸಿ ಮನೆಗೆ ಬಂದಿದ್ದ ನನಗೆ ಶಾಕ್ ಕಾದಿತ್ತು’

ಔರಂಗಾಬಾದ್‍ನ ಸಿವಿಲ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಏಪ್ರಿಲ್ 18ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಗು ಆರೋಗ್ಯವಾಗಿದೆ. ಹೀಗಾಗಿ ತಾಯಿಯಿಂದ ಮಗುವನ್ನು ಪ್ರತ್ಯೇಕಿಸಿ ಬೇರೆ ವಾರ್ಡಿನಲ್ಲಿ ಇರಿಸಲಾಗಿದೆ. ಮಗುವಿನ ಮುಖ ನೋಡಲು ಸಾಧ್ಯವಾಗದೆ ಮಹಿಳೆ ಕಣ್ಣೀರಿಟ್ಟಿದ್ದಳು. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ವಿಡಿಯೋ ಕಾಲ್ ಮೂಲಕ ತಾಯಿಗೆ ಮಗುವನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟರು.

ಆಸ್ಪತ್ರೆಯ ಸಿಬ್ಬಂದಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ”ಇದು ತುಂಬಾ ಭಾವನಾತ್ಮಕವಾಗಿದೆ. ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ, ಆದಷ್ಟು ಬೇಗ ಮಗು ತಾಯಿಯ ಮಡಿಲು ಸೇರುವಂತಾಗಲಿ” ಎಂದು ನೆಟ್ಟಿಗರು ದೇವರಲ್ಲಿ ಬೇಡಿಕೊಂಡಿದ್ದಾರೆ.

”ಮಗುವನ್ನು ತನ್ನ ಕೈಯಲ್ಲಿ ಹಿಡಿದಿಡಲು ಸಾಧ್ಯವಾಗದ ತಾಯಿಯ ಭಾವನಾತ್ಮಕ ಅವಸ್ಥೆಯನ್ನು ನನ್ನಿಂದ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದನ್ನು ನೋಡಿ ತುಂಬಾ ನೋವಾಗುತ್ತಿದೆ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *