ಡೆಲಿವರಿ ಬಾಯ್ ಮುಸ್ಲಿಂ ಎಂದು ದಿನಸಿ ಸಾಮಗ್ರಿ ನಿರಾಕರಿಸಿದ ವ್ಯಕ್ತಿ ಜೈಲು ಸೇರಿದ

– ಪತ್ನಿ ಪಡೆದಿದ್ದ ಡೆಲಿವರಿ ವಾಪಸ್ ಕೊಡು ಎಂದ
– ವಿಡಿಯೋ ಎಲ್ಲೆಡೆ ವೈರಲ್

ಮುಂಬೈ: ಕೊರೊನಾದ ಹಾವಳಿಗೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಸಂದರ್ಭದಲ್ಲಿ ಊಟ ಸಿಗದೇ ಹಲವಾರು ಮಂದಿ ಕಷ್ಟಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಂಬೈನಲ್ಲಿ 51 ವರ್ಷದ ವ್ಯಕ್ತಿಯೋರ್ವ ಆನ್‍ಲೈನ್ ಅಲ್ಲಿ ಆರ್ಡರ್ ಮಾಡಿದ್ದ ದಿನಸಿ ಸಾಮಗ್ರಿಗಳನ್ನು ಮನೆಗೆ ಡೆಲಿವರಿ ಮಾಡಿದ ಸಿಬ್ಬಂದಿ ಮುಸ್ಲಿಂ ಎಂಬ ಕಾರಣಕ್ಕೆ ಅದನ್ನು ನಿರಾಕರಿಸಿ, ಈಗ ಜೈಲು ಪಾಲಾಗಿದ್ದಾನೆ.

ಮುಂಬೈನ ಮೀರಾ ರಸ್ತೆಯಲ್ಲಿರುವ ಸೃಷ್ಟಿ ಕಾಂಪ್ಲೆಕ್ಸ್ ನ ನಿವಾಸಿ ಆನ್‍ಲೈನ್‍ನಲ್ಲಿ ಮಂಗಳವಾರ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದನು. ಹೀಗಾಗಿ ಅದನ್ನು 32 ವರ್ಷದ ಡೆಲಿವರಿ ಬಾಯ್ ಮನೆಗೆ ತಂದು ತಲುಪಿಸಿದ್ದನು. ಈ ವೇಳೆ ಆರೋಪಿಯ ಪತ್ನಿ ಸಾಮಗ್ರಿಗಳನ್ನು ಪಡೆದುಕೊಂಡು ವಾಪಸ್ ಹೋಗುವಾದ ಆರೋಪಿ ಡೆಲಿವರಿ ಬಾಯ್ ಹೆಸರನ್ನು ಕೇಳಿದ್ದಾನೆ. ಆಗ ಆತ ಮುಸ್ಲಿಂ ಎಂದು ಗೊತ್ತಾದ ತಕ್ಷಣ ಡೆಲಿವರಿ ನೀಡಿದ್ದ ಸಾಮಗ್ರಿಗಳನ್ನು ವಾಪಸ್ ಆತನಿಗೆ ಕೊಡು ನಮಗೆ ಇದು ಬೇಡ ಎಂದು ಆರೋಪಿ ಪತ್ನಿಗೆ ಹೇಳಿದ್ದಾನೆ.

ಈ ದೃಶ್ಯವನ್ನು ಡೆಲಿವರಿ ಬಾಯ್ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಆರೋಪಿ ಹೇಗೆ ಡೆಲಿವರಿ ಬಾಯ್ ಜೊತೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬುದು ಸೆರೆಯಾಗಿದೆ. ನಾವು ಅಲ್ಪಸಂಖ್ಯಾತ ಸಮುದಾಯದವರಿಂದ ಡೆಲಿವರಿ ಪಡೆಯಲ್ಲ ಎಂದು ಆರೋಪಿ ಅವಮಾನಿಸಿದ್ದಾನೆ.

ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲೂ ಜನರು ಜಾತಿ, ಧರ್ಮ ಎನ್ನುತ್ತಿರೋದು ನಿಜಕ್ಕೂ ಶಾಕ್ ಆಗುತ್ತೆ. ನಾನು ನನ್ನ ಜೀವವನ್ನು ಪಣಕ್ಕಿಟ್ಟು ದಿನಸಿ ಸಾಮಗ್ರಿಗಳನ್ನು, ಆಹಾರಗಳನ್ನು ಡೆಲಿವರಿ ಮಾಡುತ್ತಿದ್ದೇನೆ. ಆದರೂ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ? ನಾನು ನಡೆದ ಘಟನೆ ಬಗ್ಗೆ ಮನೆಮಂದಿ ಬಳಿ ಹೇಳಿದೆ. ನಿನ್ನ ಜೊತೆ ನಡೆದಿದ್ದು ತಪ್ಪು, ಪೊಲೀಸರಿಗೆ ದೂರು ನೀಡು ಎಂದು ಅವರು ಹೇಳಿದರು ಅದಕ್ಕೆ ದೂರು ನೀಡಿದೆ ಎಂದು ಡೆಲಿವರಿ ಬಾಯ್ ಅಳಲನ್ನು ತೋಡಿಕೊಂಡಿದ್ದಾನೆ.

ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಡೆಲಿವರಿ ಬಾಯ್ ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಡೆಲಿವರಿ ನೀಡಿದ್ದನು. ಆದರೂ ಜಾತಿ, ಧರ್ಮದ ಆಧಾರದ ಮೇಲೆ ಆತ ನೀಡಿದ್ದ ಡೆಲಿವರಿಯನ್ನು ನಿರಾಕರಿಸಲಾಗಿದೆ. ಹೀಗಾಗಿ ಆರೋಪಿಯನ್ನು ನಾವು ಬಂಧಿಸಿದ್ದೇವೆ. ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳಿಗೆ ಧಕ್ಕೆ ಬರುವಂತೆ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾನೆ ಎಂದು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *