ಬಿಸಿಲಿನಲ್ಲಿ ತಂಪಾಗಲು ಜೋಳದ ಅಂಬಲಿ ಮಾಡಿ ಕುಡಿಯಿರಿ

ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಇತ್ತೀಚೆಗೆ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಹೊರಗೆ ಬಂದು ತಂಪು ಪಾನೀಯ ಕುಡಿಯೋಣ ಅಂದರೆ ಅದು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿಯೇ ಜೋಳದ ಅಂಬಲಿ ಮಾಡಿ ಕುಡಿಯಿರಿ. ಇದು ಬಿಸಿಲಿನ ತಾಪಕ್ಕೆ ದೇಹವನ್ನು ತಂಪಾಗಿಸುತ್ತದೆ. ಜೋಳದ ಅಂಬಲಿ ಮಾಡುವ ವಿಧಾನ ಇಲ್ಲಿದೆ….

ಬೇಕಾಗುವ ಸಾಮಾಗ್ರಿಗಳು
1. ಜೋಳದ ಹಿಟ್ಟು – 1 ಟೀ ಸ್ಪೂನ್
2. ಬೆಳ್ಳುಳ್ಳಿ- 5 ರಿಂದ 6 ಎಸಳು
3. ತುಪ್ಪ – 1 ಟೀ ಸ್ಪೂನ್
4. ಜೀರಿಗೆ – ಅರ್ಧ ಟೀ ಸ್ಪೂನ್
5. ಮಜ್ಜಿಗೆ – 1 ಗ್ಲಾಸ್
6. ನೀರು – 1 ಗ್ಲಾಸ್
7. ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ
* ಒಂದು ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟುಕೊಳ್ಳಿ. ಕಡಿಮೆ ಉರಿಯಲ್ಲಿಯೇ ಸ್ಟೌವ್ ಇರಬೇಕು. ಈಗ ಒಂದು ಟೀ ಸ್ಪೂನ್ ತುಪ್ಪ ಹಾಕಿಕೊಳ್ಳಿ. (ತುಪ್ಪ ಇರದಿದ್ರೆ ಅಡುಗೆ ಎಣ್ಣೆ ಬಳಸಬಹುದು).
* ತುಪ್ಪ ಬಿಸಿಯಾಗುತ್ತಿದ್ದಂತೆ ಜೀರಿಗೆ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಒಗ್ಗರಣೆ ಸುವಾಸನೆ ಬರುತ್ತಿದ್ದಂತೆ ಒಂದು ಟೀ ಸ್ಪೂನ್ ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜೋಳದ ಹಿಟ್ಟು ಹಾಕುತ್ತಿದ್ದಂತೆ ಒಂದು ಗ್ಲಾಸ್ ನೀರು ಹಾಕಿಕೊಂಡು ಹಿಟ್ಟು ಗಂಟು ಬರದಂತೆ ಮಿಕ್ಸಿ ಮಾಡಿ. ಅಂಬಲಿ ತೆಳುವಾಗಿದ್ರೆ ಕುಡಿಯಲು ಚೆನ್ನಾಗಿ ಇರುತ್ತದೆ. ಒಂದು ಗ್ಲಾಸ್‍ಗಿಂತ ಹೆಚ್ಚು ನೀರು ಸೇರಿಸಿದರೂ ಪರವಾಗಿಲ್ಲ.
* ಎಲ್ಲವನ್ನು ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಿ ಸ್ಟೌವ್ ಆಫ್ ಮಾಡಿಕೊಳ್ಳಿ.


* ಜೋಳದ ಮಿಶ್ರಣ ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಜ್ಜಿಗೆ ಮಿಕ್ಸ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಈಗ ಒಂದು ಕಡಗೋಲಿನಿಂದ ಮಿಶ್ರಣವನ್ನು ಕಡಿದುಕೊಳ್ಳಿ. ಕಡಗೋಲು ಇಲ್ಲದಿದ್ದರೆ ಮಿಕ್ಸಿಗೆ ಹಾಕಿಕೊಂಡ್ರೆ ಜೋಳದ ಅಂಬಲಿ ರೆಡಿ.
(ಅಂಬಲಿ ರೆಡಿಯಾದ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೋತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಸೇರಿಸಿ ಕುಡಿಯಬಹುದು)

Comments

Leave a Reply

Your email address will not be published. Required fields are marked *