ಊರಿಂದ ಕೊರೊನಾ ತೊಲಗಿಸಲು ಬ್ಲೇಡ್‍ನಿಂದ ನಾಲಿಗೆ ಕತ್ತರಿಸಿಕೊಂಡ ಯುವಕ

– ಕನಸಿನಲ್ಲಿ ದೇವರು ಬಂದು ಹೇಳಿತು ಎಂದ
– ಮೂಡನಂಬಿಕೆಗೆ ನಾಲಿಗೆ ಕಳೆದುಕೊಂಡ

ಗಾಂಧಿನಗರ: ಇಡೀ ವಿಶ್ವವನ್ನೇ ಬೆಂಬಿಡದೇ ಕಾಡುತ್ತಿರುವ ಕೊರೊನಾ ವೈರಸ್ ತಡೆಗೆ ಮೌಢ್ಯ ಆವರಿಸಿಕೊಂಡಿದ್ದು, ಗುಜರಾತ್‍ನಲ್ಲಿ ಯುವಕನೋರ್ವ ಕೊರೊನಾ ವೈರಸ್ ತೊಲಗಿಸಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾನೆ.

ಮಧ್ಯಪ್ರದೇಶ ಮೂಲದ ಯುವಕ ರವೀಂದರ್ ಶರ್ಮಾ(20) ನಾಲಿಗೆ ಕತ್ತರಿಸಿಕೊಂಡಿದ್ದಾನೆ. ಗುಜರಾತ್‍ನ ಸೂಗಮ್ ಗ್ರಾಮದಲ್ಲಿರುವ ಭವಾನಿ ಮಾತಾ ದೇವಾಲಯದಲ್ಲಿ 15 ತಿಂಗಳಿನಿಂದ ಈತ ಕೆಲಸ ಮಾಡುತ್ತಿದ್ದನು. ರವಿಂದರ್ ಕನಸಿನಲ್ಲಿ ದೇವಿ ಬಂದು ಊರಿಂದ ಕೊರೊನಾ ಸೋಂಕು ತೊಲಗಲು ನಾಲಿಗೆ ಕತ್ತರಿಸಿಕೋ ಎಂದು ಹೇಳಿದ್ದಳಂತೆ. ಇದನ್ನೇ ನಂಬಿದ ರವೀಂದರ್ ಭಾವಿಸಿ ನಾಂದೇಶ್ವರಿ ಮಾತಾ ದೇವಾಲಯಕ್ಕೆ ತೆರಳಿ ಬ್ಲೇಡ್‍ನಿಂದ ತನ್ನ ನಾಲಿಗೆ ಕೊಯ್ದುಕೊಂಡಿದ್ದಾನೆ.

ಈ ವೇಳೆ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದ ಈತನನ್ನು ನೋಡಿದ ಬಿಎಸ್‍ಎಫ್ ಯೋಧರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಈ ಘಟನೆ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿ ಬಿಎಸ್‍ಎಫ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ರೀತಿ ಮೌಢ್ಯತೆಗೆ ಶರಣಾಗದಿರಿ. ದಯವಿಟ್ಟು ಕೋವಿಡ್-19 ತಡೆಗೆ ಸರ್ಕಾರಿ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ. ಸಾಮಾಜಿಕ ಅಂತರ ಕಾಯ್ದುಕೊಂಡು, ಆಗಾಗ ಕೈಗಳನ್ನು ಸೋಪಿನಿಂದ ತೊಳೆಯುತ್ತಿರಿ ಇದೇ ಸದ್ಯಕ್ಕೆ ಇರುವ ಪರಿಹಾರ ಎಂದು ತಿಳಿ ಹೇಳಿದ್ದಾರೆ.

ಸದ್ಯ ಗುಜರಾತ್‍ನಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದುವರೆಗೆ 1,604 ಮಂದಿಗೆ ಸೋಂಕು ತಗುಲಿದ್ದು, 58 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ದೇಶದಲ್ಲಿ 16,365 ಮಂದಿ ಕೊರೊನಾಗೆ ತುತ್ತಾಗಿದ್ದು, ಸಾವಿನ ಸಂಖ್ಯೆ 522ಕ್ಕೆ ಏರಿದೆ.

Comments

Leave a Reply

Your email address will not be published. Required fields are marked *