ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು

ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು.

ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ 277 ಮಂದಿಗೆ ಸೋಂಕು ವ್ಯಾಪಿಸಿದೆ. ಭಾರತೀಯ ನೌಕಾಪಡೆಯ 21 ಯೋಧರಿಗೆ ಸೋಂಕು ತಗುಲಿದೆ. ಉತ್ತರಾಖಂಡ್‍ನಲ್ಲಿ 9 ತಿಂಗಳ ಹಸುಗೂಸಿಗೆ ಸೋಂಕು ತಗುಲಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಮೇ 4ರಿಂದ ಆರಂಭವಾಗಲಿದೆ. ಜೂನ್ 1ರಿಂದ ವಿದೇಶಿ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಇನ್ನು ಏಪ್ರಿಲ್ 20ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದೆ.

ಜಗತ್ತಿನಾದ್ಯಂತ ಕೊರೋನಾ ಸೋಂಕು ಪ್ರಮಾಣ ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಕೊರೊನಾಗೆ ಮೃತಪಟ್ಟವರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. 22.70 ಲಕ್ಷ ಮಂದಿಗೆ ಸೋಂಕು ವ್ಯಾಪಿಸಿದೆ. ಅಮೆರಿಕದಲ್ಲಿ ಸ್ಥಿತಿ ದಾರುಣವಾಗಿದೆ. ನಿನ್ನೆ ಒಂದೇ ದಿನ 4,600 ಮಂದಿ ಬಲಿ ಆಗಿದ್ದು, ಮೃತರ ಸಂಖ್ಯೆ 37 ಸಾವಿರ ದಾಟಿದೆ. ನ್ಯೂಯಾರ್ಕ್ ಒಂದರಲ್ಲೇ 17 ಸಾವಿರ ಮಂದಿ ಬಲಿ ಆಗಿದ್ದಾರೆ.

ಸೋಂಕಿತರ ಸಂಖ್ಯೆ 7.10 ಲಕ್ಷ ದಾಟಿದೆ. ಈ ಪೈಕಿ ಶೇ.30ರಷ್ಟು ಮಂದಿ ಆಫ್ರಿಕನ್ ಅಮೆರಿಕನ್ನರು. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ದಾಟಿದೆ. ಇಟಲಿಯಲ್ಲಿ 23 ಸಾವಿರ, ಫ್ರಾನ್ಸ್‍ನಲ್ಲಿ 19 ಸಾವಿರ, ಬ್ರಿಟನ್‍ನಲ್ಲಿ ಹದಿನಾಲ್ಕೂವರೆ ಸಾವಿರ ಮಂದಿ ಬಲಿ ಆಗಿದ್ದಾರೆ. ಬ್ರಿಟನ್‍ನಲ್ಲಿ ಮೂರು ವಾರ ಲಾಕ್‍ಡೌನ್ ವಿಸ್ತರಿಸಲಾಗಿದೆ. ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ಹೊತ್ತಿಗೆ ಆಫ್ರಿಕಾ ಖಂಡದಲ್ಲಿ ಕನಿಷ್ಠ 3 ಲಕ್ಷ ಮಂದಿ ಸಾವನ್ನಪ್ಪಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಸ್ವೀಡನ್ ರಾಜಕುಮಾರಿ ಸೋಫಿಯಾ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಕೀನ್ಯಾದ ನೈರೂಬಿಯಲ್ಲಿ ಅಗತ್ಯ ವಸ್ತುಗಳ ಜೊತೆಗೆ ಬಡವರಿಗೆ ಮದ್ಯವನ್ನು ಪೂರೈಸಲಾಗುತ್ತಿದೆ.

Comments

Leave a Reply

Your email address will not be published. Required fields are marked *