ರಿಲೀಸ್‍ಗೂ ಮುನ್ನವೇ ಕೋಟಿಗೊಬ್ಬ-3 ದಾಖಲೆ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಕುರಿತು ಅಚ್ಚರಿಯ ಮಾಹಿತಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿ ಅವಾಂತರ ಸೃಷ್ಟಿಸದಿದ್ದರೆ, ಮೇ 1ರ ಕಾರ್ಮಿಕರ ದಿನದಂದು ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ. ಆದರೆ ಇದೀಗ ಅದೇ ಅಭಿಮಾನಿಗಳ ಟ್ವೀಟ್ ಖಾತೆಯಿಂದ ಕೋಟಿಗೊಬ್ಬ-3 ಸಿನಿಮಾ ಕುರಿತು ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ.

ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಚಿತ್ರದ ಬಿಡುಗಡೆಗೆ ಕೆಲ ಫೈನಲ್ ಕೆಲಸಗಳಷ್ಟೇ ಬಾಕಿ ಇದ್ದು, ಲಾಕ್‍ಡೌನ್‍ನಿಂದಾಗಿ ಸಿನಿಮಾದ ಕೆಲಸಗಳು ಸ್ಥಗಿತಗೊಂಡಿವೆ. ಇದರ ಮಧ್ಯೆಯೇ ಇದೀಗ ಸಿನಿಮಾದ ಕುರಿತು ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ಅದೂ ಸಹ ಸಿನಿಮಾದ ಟಿವಿ ರೈಟ್ಸ್ ಕುರಿತು.

ಹೌದು ಖಾಸಗಿ ವಾಹಿನಿಯೊಂದು ದಾಖಲೆಯ ಮೊತ್ತಕ್ಕೆ ಕೋಟಿಗೊಬ್ಬ-3 ಸಿನಿಮಾವನ್ನು ಖರೀದಿಸಿದೆಯಂತೆ. ಬರೋಬ್ಬರಿ 9 ಕೋಟಿ ರೂ.ಗಳಿಗೆ ವಾಹಿನಿಗೆ ಟಿವಿ ರೈಟ್ಸ್ ಮಾರಾಟವಾಗಿದೆ ಎಂದು ಕಿಚ್ಚ ಸುದೀಪ್ ಅಭಿಮಾನಿಗಳ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಚಿತ್ರ ತಂಡ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಟ್ವಿಟ್ಟರ್‍ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಇದನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸುದೀಪ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಮಡೋನ್ನಾ ಸೆಬಸ್ಟಿಯನ್, ಶ್ರದ್ಧಾ ದಾಸ್ ಹಾಗೂ ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಕೋಟಿಗೊಬ್ಬ-3 ಮಾತ್ರವಲ್ಲ ರಾಬರ್ಟ್, ಯುವರತ್ನ ಸೇರಿದಂತೆ ನಿರ್ಮಾಣ ಹಂತದಲ್ಲಿದ್ದ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹೊಡೆತ ಬಿದ್ದಿದೆ. ಇದರಿಂದಾಗಿ ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ. ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದ್ದು, ಸಿನಿಮಾ ಇಂಡಸ್ಟ್ರಿ ಸಹ ಸಂಪೂರ್ಣ ಬಂದ್ ಆಗಿದೆ.

Comments

Leave a Reply

Your email address will not be published. Required fields are marked *