ಮರಿ ಟೈಗರ್ ಜೊತೆ ಪಾರು

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮರಿ ಟೈಗರ್ ಎಂದೇ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್ ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ರಾಬರ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟೈಸನ್ ಸಿನಿಮಾ ನಂತರ ಮರಿ ಟೈಗರ್ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ಮದೇ ಕೆಲ ಸಿನಿಮಾಗಳಿಗೂ ಸಹ ಸಹಿ ಹಾಕಿದ್ದಾರೆ.

ಸದ್ಯ ಇದೀಗ ವಿನೋದ್ ಪ್ರಭಾಕರ್ ಬಳಿ ಸಿನಿಮಾ ಒಂದರ ಆಫರ್ ಬಂದಿದ್ದು, ಫೈನಲ್ ಸಹ ಆಗಿದೆ. ಇದೀಗ ಕೊರೊನಾ ವೈರಸ್ ಹಿನ್ನೆಲೆ ದೇಶದೆಲ್ಲೆಡೆ ಲಾಕ್‍ಡೌನ್ ಜಾರಿಯಲ್ಲಿದ್ದು, ಈ ಹಿನ್ನೆಲೆ ಚಿತ್ರೀಕರಣ ಸ್ವಲ್ಪ ತಡವಾಗಿಯೇ ಆರಂಭವಾಗಲಿದೆ. ಆದರೆ ಈ ಸಮಯದಲ್ಲಿ ಸಿನಿಮಾದ ಇತರೆ ಕೆಲಸಗಳಲ್ಲಿ ಚಿತ್ರ ತಂಡ ಬ್ಯುಸಿಯಾಗಿದ್ದು, ತಾರಾಗಣದ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ.

ಎ.ಎಂ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿಯವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮರಿ ಟೈಗರ್ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮ ಆಗಿಲ್ಲ. ಆದರೆ ತಾರಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಹೀರೋಯಿನ್ ಆಯ್ಕೆ ಮಾಡಲಾಗಿದ್ದು, ವಿನೋದ್‍ಗೆ ಜೋಡಿಯಾಗಿ ಪಾರ್ವತಿ ಅರುಣ್ ಅಭಿನಯಿಸಲಿದ್ದಾರೆ. ಮೂಲತಃ ಮಾಲಿವುಡ್‍ನವರಾದ ಪಾರ್ವತಿ, ಈ ಹಿಂದೆ ‘ಗೋಲ್ಡನ್ ಸ್ಟಾರ್’ ಗಣೇಶ್ ಜೊತೆ ‘ಗೀತಾ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ವಿನೋದ್ ಪ್ರಭಾಕರ್ ಟೈಸನ್, ಮರಿ ಟೈಗರ್, ರಗಡ್ ಸಿನಿಮಾಗಳಲ್ಲಿ ನಟಿಸಿದ್ದು, ಪ್ರಸ್ತುತ ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಲವು ಪ್ರಾಜೆಕ್ಟ್‍ಗಳ ಕುರಿತು ಸಹ ಚಿಂತನೆ ನಡೆಸುತ್ತಿದ್ದಾರೆ.

ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದ್ದು, ಲಾಕ್‍ಡೌನ್ ಪರಿಸ್ಥಿತಿ ತಿಳಿಯಾದ ಬಳಿಕ ಶುರುವಾಗಲಿದೆ. ಸಿನಿಮಾ ಟೈಟಲ್ ಕೂಡ ಆಗಲೇ ತಿಳಿಯಲಿದೆ. ಪ್ರಸ್ತುತ ಫೋಟೋಶೂಟ್ ನಡೆದಿಯುತ್ತಿದೆಯಂತೆ. ‘ಮೂರ್ಕಲ್ ಎಸ್ಟೇಟ್’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಮೋದ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ. ಈ ಮೂಲಕ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ವಿನೋದ್ ಪ್ರಭಾಕರ್ ತಯಾರಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *